‘ನೆಲ ಮುಗಿಲನಪ್ಪಿದುದೋ, ಮುಗಿಲೇ ನೆಲನಪ್ಪಿದುದೋ? ಮಳೆಯಲ್ಲಿ ಬಯಲಾಯ್ತು ಬಯಲಿನಂತರವು’ ಎಂದಿದ್ದಾರೆ ಓರ್ವ ಕವಿ. ಭೂಮಿ ಮತ್ತು ಮೋಡಗಳ ನಡುವಿನ ‘ಅವಕಾಶ’ದ ಸುಳಿವೂ ಸಿಗದ ಹಾಗೆ ಒಂದೇ ಸಮನೆ ಸುರಿಯುತ್ತಿದ್ದ ಕುಂಭದ್ರೋಣ ಮಳೆಯನ್ನು ಕಂಡ ಕವಿಯಿಂದ ಹೊಮ್ಮಿರುವ ಉದ್ಗಾರವಿದು ಎನ್ನಿ.
ಆದರೆ ಕಳೆದ ವರ್ಷಪೂರ್ತಿ ಕುಂಭದ್ರೋಣ ಮಳೆಯಿರಲಿ, ಮಾಮೂಲಿ ಮಳೆಯೂ ಸಾಕಷ್ಟು ಆಗದೆ ಭೂಮಿಯ ಒಡಲು ಬಿರಿದಿರುವುದು, ಎಲ್ಲೆಡೆ ನೀರಿಗೆ ಹಾಹಾಕಾರವೆದ್ದಿರುವುದು ಸದ್ಯದ ಕಹಿವಾಸ್ತವ. ಸಾಲದೆಂಬಂತೆ ಕಣ್ಣುಗಳೇ ಇಂಗಿ ಹೋಗು ವಷ್ಟು ಪ್ರಖರವೂ ಅಸಹನೀಯವೂ ಆಗಿರುವ ಬಿಸಿಲು. ‘ಇದನ್ನು ಇನ್ನೂ ಎಷ್ಟು ದಿನ ಸಹಿಸಿಕೊಂಡಿರಬೇಕು?’ ಎಂಬ ತಲ್ಲಣ ದಲ್ಲೇ ಜನರು ದಿನದೂಡುತ್ತಿರುವಾಗಲೇ ಶುಭಸುದ್ದಿಯೊಂದು ಬಂದಿದೆ.
ಖಾಸಗಿ ಹವಾಮಾನ ಸಂಸ್ಥೆಯೊಂದು ನೀಡಿರುವ ಮುನ್ಸೂಚನೆಯ ಅನುಸಾರ, ಈ ವರ್ಷ ಭರಪೂರ ಮಳೆಯಾಗಲಿದೆಯಂತೆ. ಇದು ನಿಜವಾಗಿ, ಇಳೆಗೆ ಮಳೆಯ ಅವತರಣವಾಗಲಿ. ಅದರಿಂದಾಗಿ ಕೆರೆ-ಕಟ್ಟೆ-ಬಾವಿಗಳು, ತೊರೆ-ನದಿಗಳು ತುಂಬಿ ಹರಿಯಲಿ. ಮಳೆಯನ್ನೇ ಆಶ್ರಯಿಸಿರುವ ಮಣ್ಣಿನ ಮಕ್ಕಳ ಕನಸುಗಳು ಸಾಕಾರಗೊಳ್ಳಲಿ ಎಂಬುದು ಸಹೃದಯಿಗಳ ಆಶಯ. ಮಳೆಯಿದ್ದರೇ ಬೆಳೆ, ಭರ್ಜರಿ -ಸಲು ಬಂದರೇ ಬದುಕು, ಅಲ್ಲವೇ? ನೀರಿಗೆ ಜೀವಸೆಲೆ ಎನ್ನುವುದು, ನೀರಿಲ್ಲದ ಭೂಮಿಯನ್ನು ಬೆಂಗಾಡು/ ಮರುಭೂಮಿ ಎಂದೆಲ್ಲಾ ಕರೆಯುವುದು ಈ ಕಾರಣಕ್ಕೇ.
ವರಕವಿ ಬೇಂದ್ರೆಯವರು ತಮ್ಮ ‘ಇಳಿದು ಬಾ ತಾಯಿ ಇಳಿದು ಬಾ’ ಗೀತೆಯಲ್ಲಿ ಗಂಗೆಯನ್ನು ‘ರಸಪೂರ ಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ’ ಎಂದು ವರ್ಣಿಸಿದ್ದಾರೆ. ಆದರೆ ಪ್ರಾಕೃತಿಕ ಕಾರಣಗಳು ಮಾತ್ರವಲ್ಲದೆ ನಮ್ಮ ಸ್ವಯಂಕೃತಾಪರಾಧ, ಸ್ವಾರ್ಥಲಾಲಸೆಗಳ ಕಾರಣದಿಂದಾಗಿ ಗಂಗೆಯು ನಮ್ಮ ಮೇಲೆ ಕೆಲವೊಮ್ಮೆ ಮುನಿಸಿಕೊಳ್ಳುವುದುಂಟು. ಅತಿರೇಕದ ಅಭಿವೃದ್ಧಿ ಯ ಹುಕಿಗೆ ಬಿದ್ದು ಇದ್ದಬದ್ದ ಮರಗಳಿಗೆಲ್ಲಾ ಕೊಡಲಿಯಿಡುತ್ತಾ ಹೋದರೆ, ಮಳೆಯಾದರೂ ಹೇಗೆ ಬಂದೀತು, ಕೆರೆ-ಕಟ್ಟೆಗಳು ಹೇಗೆ ತುಂಬಿಯಾವು? ‘ಕಾಡಿದ್ದರೇ ನಾಡು’ ಎಂಬ ಸತ್ಯವನ್ನರಿತು ಅದನ್ನು ಕಾರ್ಯರೂಪಕ್ಕೆ ಇಳಿಸುವಲ್ಲಿ ವ್ಯಸ್ತ ರಾಗೋಣ. ಇಳೆಯಲ್ಲಿ ಮಳೆಯ ನರ್ತನವಾಗುವುದಕ್ಕೆ ಅನುವುಮಾಡಿಕೊಡೋಣ.