Wednesday, 18th September 2024

ಸದನಕ್ಕೆ ಗೌರವ ಕೊಡುವುದನ್ನು ಕಲಿಯಲಿ

ರಾಜ್ಯಸಭಾ ಅಧ್ಯಕ್ಷರ ಸ್ಥಾನ ವಿಶಿಷ್ಟ ಹಾಗೂ ವಿಭಿನ್ನವಾದುದು. ಉಪ ರಾಷ್ಟ್ರಪತಿ ಸ್ಥಾನವು ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಒಂದು. ಅವರು ರಾಜ್ಯ ಸಭೆಯ ಅಧ್ಯಕ್ಷರ ಸ್ಥಾನದಲ್ಲಿ ಕುಳಿತಿರುವಾಗ ಎಲ್ಲ ಸಂಸದರೂ ಅವರ ನಿರ್ದೇಶನದ ಅಡಿಯಲ್ಲಿ ಸಂಸದೀಯ ನಡವಳಿಕೆಯನ್ನು ತೋರಬೇಕು.

ಆದರೆ ರಾಜ್ಯಸಭೆ ಅಧ್ಯಕ್ಷರ ನಿರ್ದೇಶನಗಳನ್ನು ಉಲ್ಲಂಘಿಸಿ ಸದನದಲ್ಲಿ ದುರ್ವರ್ತನೆ ತೋರಿದ ಪರಿಣಾಮ ೪೯ ಸಂಸದರು ಅಮಾನತಾಗಿದ್ದಲ್ಲದೆ, ಸಂಸತ್ತಿನ ಹೊರಗೆ ನಿಂತು ಸಭಾಧ್ಯಕ್ಷರ ವರ್ತನೆ ಗಳನ್ನು ಅಣಕಿಸಿ ತೋರಿಸುವ ಮೂಲಕ ದುರ್ನಡತೆ ತೋರಿದ್ದು ದುರಂತವೇ ಸರಿ. ಕಾಂಗ್ರೆಸ್ ಸಂಸದರ ಈ ವರ್ತನೆ ರಾಜ್ಯಸಭಾ ಅಧ್ಯಕ್ಷರಿಗೆ, ಉಪರಾಷ್ಟ್ರಪತಿಗೆ, ಸದನಕ್ಕೆ ತೋರಿದ ಅಗೌರವ. ಸದನದ ಬಗ್ಗೆ, ಅಲ್ಲಿನ ಅಧ್ಯಕ್ಷ ಪೀಠದ ಬಗ್ಗೆ ದೇಶದ ಜನತೆಗೆ ಪೂಜನೀಯ ಭಾವನೆ ಹೊಂದಿದ್ದಾರೆ.

ಅದು ದೇಶದ ನೂರಾರು ಜನಪ್ರತಿನಿಧಿಗಳನ್ನು ಸಂಸದೀಯ ನಡವಳಿಕೆಗಳ ಸನ್ನಡತೆಯ ಹಾದಿಯಲ್ಲಿ ಕೊಂಡೊಯ್ದು ಚರ್ಚೆಗಳನ್ನು ತುದಿ ಮುಟ್ಟಿ ಸುವ ಘನತೆವೆತ್ತ ಹುದ್ದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಇರುವ ಕೆಲವು ಅಧಿಕಾರಗಳು ಇವರಿಗೂ ಇವೆ. ಆದರೆ ಈ ರೀತಿ ಅಣಕವಾಡುವ ಮೂಲಕ ಸಂಸದರು ಕೀಳುಮಟ್ಟಕ್ಕೆ ಇಳಿದಿದ್ದಾರೆ. ಸಂಸದರ ಕೃತ್ಯ ಒಂದೆಡೆಯಾದರೆ, ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡ ರಾಹುಲ್ ಗಾಂಧಿ ಅವರ ವರ್ತನೆ ಇನ್ನಷ್ಟು ನಾಚಿಕೆಗೇಡಿನದ್ದು. ರಾಷ್ಟ್ರೀಯ ಪಕ್ಷವೊಂದರ ಹೈ ಕಮಾಂಡ್ ನಾಯಕನಾಗಿ, ಭವಿಷ್ಯದಲ್ಲಿ ಇಂಡಿಯ ಮೈತ್ರಿಕೂಟ ಗೆದ್ದು ಅಧಿಕಾರ ಹಿಡಿದರೆ ಪ್ರಧಾನಿಯೂ ಆಗಬಹುದಾದ ಪ್ರಭಾವವನ್ನು ಹೊಂದಿದ ವ್ಯಕ್ತಿಯೇ ಇಂತಹ ವರ್ತನೆ ತೋರಿದ್ದು ಕ್ಷಮೆಗೆ ಅರ್ಹವಲ್ಲ.

ಸಂಸದರು ಪ್ರಬುದ್ಧತೆ ಕಳೆದುಕೊಂಡವರಂತೆ ವರ್ತಿಸತೊಡಗಿದರೆ ಪ್ರಜೆಗಳು ಇನ್ನಷ್ಟು ದಾರಿ ತಪ್ಪುತ್ತಾರೆ. ಅವರ ಪಕ್ಷದ ಕಾರ್ಯಕರ್ತರಂತೂ
ದುರ್ನಡತೆಗೆ ಸಿಕ್ಕಿದ ಒಪ್ಪಿಗೆ ಎಂದೇ ತಿಳಿಯುತ್ತಾರೆ. ಆದ್ದರಿಂದ ಇನ್ನಾದರೂ ಸಂಸದರು ಇಂಥ ದುರ್ನಡತೆಗಳನ್ನು ಬಿಟ್ಟು ಸದನಕ್ಕೆ ಸೂಕ್ತವಾದ ಘನತೆ
ಯನ್ನು ತೋರಿಸಲಿ. ಸದನದ ಹೊರಗೂ ಅನಗತ್ಯ ಪುಂಡಾಟಿಕೆಗಳನ್ನು ಬಿಟ್ಟು, ತಮ್ಮ ಪ್ರತಿಭೆಯನ್ನು ತಮ್ಮ ಮತಕ್ಷೇತ್ರದ ಜನತೆಗೆ ಉಪಯುಕ್ತವಾಗು ವಂತೆ ವಿನಿಯೋಗಿಸುವತ್ತ ಗಮನ ಕೊಡಲಿ.

Leave a Reply

Your email address will not be published. Required fields are marked *