ಬೆಂಗಳೂರಿನಲ್ಲಿ ಬಾರ್, ರೆಸ್ಟೋರೆಂಟ್‌ಗಳನ್ನು ರಾತ್ರಿ ಒಂದು ಗಂಟೆ ತನಕ ವಿಸ್ತರಿಸಿದ ಬೆನ್ನಿಗೇ ಅಪಘಾತ ಮತ್ತು ಅಪರಾಧ ಪ್ರಮಾಣಗಳು ಹೆಚ್ಚುತ್ತಿರು ವುದು ಆತಂಕದ ವಿಷಯ. ಶನಿವಾರ ಮಧ್ಯರಾತ್ರಿ ಹೊಸೂರು ರಸ್ತೆಯಲ್ಲಿ ಅನ್ಯ ರಾಜ್ಯದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು ಈ ಪ್ರಕರಣವನ್ನು ಗಮನಿಸಿದರೆ, ತಡರಾತ್ರಿವರೆಗೆ ಪಬ್, ಬಾರ್‌ಗಳನ್ನು ತೆರೆದಿಟ್ಟರೆ ಆಗುವ ಪರಿಣಾಮವನ್ನು ಊಹಿಸಬಹುದು.
ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಅನ್ಯ ರಾಜ್ಯದ ವಿದ್ಯಾರ್ಥಿನಿ ತನ್ನ ಗೆಳೆಯರ ಜೊತೆ ಕೋರಮಂಗಲದ ಪಬ್‌ವೊಂದರಲ್ಲಿ ಸ್ನೇಹಿತರೊಂದಿಗೆ ತಡರಾತ್ರಿ ತನಕ ಪಾರ್ಟಿ ಮಾಡಿ, ರಾತ್ರಿ ಒಂದರ ಸುಮಾರಿಗೆ ತನ್ನ ರೂಮಿಗೆ ತೆರಳುತ್ತಿದ್ದಾಗ ಈ ಕೃತ್ಯ ನಡೆದಿದೆ. ಅಪರಿಚಿತನೊಂದಿಗೆ ಬೈಕ್‌ನಲ್ಲಿ ಡ್ರಾಪ್ ಕೇಳಿ ಪಡೆದಿದ್ದ ವಿದ್ಯಾರ್ಥಿನಿ, ಆತನಿಂದಲೇ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದಾಳೆ. ಒಂದೂವರೆ ಕೋಟಿ ಜನಸಂಖ್ಯೆಯ ಬೆಂಗಳೂರಿನಂತಹ ಬೃಹತ್
ನಗರದಲ್ಲಿ ಎಲ್ಲರಿಗೂ ಪೊಲೀಸ್ ರಕ್ಷಣೆ ಕೊಡಲು ಸಾಧ್ಯವಿಲ್ಲ. ನಾಗರಿಕರು ತಮ್ಮ ಸುರಕ್ಷೆಯ ಬಗ್ಗೆ ತಾವೇ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಬೇಕು.
ಅದರಲ್ಲೂ ತಡರಾತ್ರಿಯಲ್ಲಿ ಅಪರಿಚಿತ ಪ್ರದೇಶದಲ್ಲಿ ಸಂಚರಿಸುವಾಗ ಮುಂಜಾಗ್ರತೆ ವಹಿಸಲೇಬೇಕು. ಎಚ್‌ಎಸ್‌ಆರ್ ಲೇಔಟ್‌ನ ಘಟನೆಯನ್ನೇ
ತೆಗೆದುಕೊಳ್ಳುವುದಾದರೆ, ಆರಂಭದಲ್ಲಿ ಸ್ನೇಹಿತರೊಂದಿಗೆ ವಿದ್ಯಾರ್ಥಿನಿ ಪಯಣಿಸುತ್ತಿದ್ದ ಕಾರು ೨ ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಅವರೊಂದಿಗೆ ವಾಗ್ವಾದ ಆರಂಭವಾದಾಗ, ಆಟೋ ಏರಿದ್ದಾಳೆ. ಬಳಿಕ ಆಟೋ ಬಿಟ್ಟು ಅಪರಿಚಿತನ ಜತೆ ಬೈಕ್‌ನಲ್ಲಿ ಡ್ರಾಪ್ ಪಡೆದು ತಾನೇ ಅಪಾಯ ತಂದುಕೊಂಡಿ ದ್ದಾಳೆ. ರಾಜ್ಯದಲ್ಲಿ ರಾತ್ರಿ ೧೧ರ ಬಳಿಕ ಬಾರ್, ಪಬ್‌ಗಳನ್ನು ತೆರೆಯಲು ಅವಕಾಶ ಇಲ್ಲದಿದ್ದಾಗಲೂ ಕದ್ದು ಮುಚ್ಚಿ ತಡರಾತ್ರಿ ತನಕ ವಹಿವಾಟು ನಡೆಯುತ್ತಿತ್ತು.
ಇದೀಗ ಅಧಿಕೃತವಾಗಿ ವಿಸ್ತರಣೆಯಾದ ಬಳಿಕ ಮುಂಜಾನೆ ತನಕವೂ ಮೋಜು, ಮಸ್ತಿ ಮುಂದು ವರಿಯುತ್ತಿದೆ. ನಗರದ ಹಲವಾರು ಬಡಾವಣೆಗಳಲ್ಲಿ ಹೊಸ ಪಬ್‌ಗಳು ತಲೆ ಎತ್ತಿದ್ದು, ವಿದ್ಯಾರ್ಥಿ ಸಮೂಹವನ್ನು ಆಕರ್ಷಿಸಲು ಅನೇಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಮಂಗಳೂರಿನ ಪಬ್‌ವೊಂದರಲ್ಲಿ ಇತ್ತೀಚೆಗೆ ‘ಸ್ಟೂಡೆಂಟ್ ಫೆಸ್ಟಿವಲ್’ ಹಮ್ಮಿಕೊಂಡಿತ್ತು ಸುದ್ದಿಯಾಗಿತ್ತು. ಯುವ ಸಮೂಹವನ್ನು ಮದ್ಯಸಾಗರ ದಲ್ಲಿ ಮುಳುಗಿಸಲು ಸರಕಾರವೇ ಬೆಂಗಾವ ಲಾಗಿ ನಿಂತಿರುವುದು ದುರದೃಷ್ಟಕರ. ಒಂದೆಡೆ ನಶೆಮುಕ್ತ ಭಾರತ ಅಭಿಯಾನ ನಡೆಸುತ್ತಾ ಇನ್ನೊಂದೆಡೆ ನಶೆಭರಿತ ಭಾರತಕ್ಕೆ ಸರಕಾರವೇ ನೇತೃತ್ವ ವಹಿಸಬಾರದು. ರಾತ್ರಿ ೧೧ರ ಬಳಿಕ ಮದ್ಯಬಿಟ್ಟು ಆಹಾರಕ್ಕಷ್ಟೇ ಅನುಮತಿ ಸೀಮಿತಗೊಳಿಸಬೇಕು.