ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿ ಪ್ರಾರಂಭವಾದಂದಿನಿಂದಲೂ ‘ರಾಯಲ್ ಚಾಲೆಂಜರ‍್ಸ್
ಬೆಂಗಳೂರು’ ತಂಡದೆಡೆಗೆ ಕ್ರೀಡಾಭಿಮಾನಿಗಳು ಭರಪೂರ ಅಭಿಮಾನವನ್ನು ತೋರಿಸುತ್ತಲೇ ಬಂದಿದ್ದಾರೆ. ಪ್ರತಿ ವರ್ಷದ ಪಂದ್ಯಾವಳಿಯಲ್ಲಿ ತಮ್ಮ ತಂಡ ಸೋತಾಗ ಅವರು ಕೊಂಚ ಬೇಸರಿಸಿಕೊಂಡರೂ, ಮುಂದಿನ ವರ್ಷದ ಪಂದ್ಯ ಶುರುವಾಗುವ ಆಸುಪಾಸಿನಲ್ಲಿ ‘ಈ ಸಲ ಕಪ್ ನಮ್ದೇ’ ಎಂಬ ಆತ್ಮವಿಶ್ವಾಸವನ್ನು ಹೊಮ್ಮಿಸುವುದು ವಾಡಿಕೆಯೇ ಆಗಿಬಿಟ್ಟಿದೆ.
ಆದರೆ ಅವರ ನಿರೀಕ್ಷೆಯಿನ್ನೂ ಈಡೇರಿಲ್ಲ. ಕಪ್‌ನ ಹತ್ತತ್ತಿರ ಬರುವುದಕ್ಕೂ ಆರ್‌ಸಿಬಿಗೆ ಸಾಧ್ಯವಾಗದಷ್ಟರ ಮಟ್ಟಿಗೆ ಸೋಲಿನ ಪರಂಪರೆ ಅದನ್ನು ಸುತ್ತಿಕೊಂಡಿದೆ. ನಿಜ, ಯಾವುದೇ ಕ್ರೀಡೆಯಾಗಲಿ ಸೋಲು-ಗೆಲುವು ಸಹಜವೇ ಮತ್ತು ಪ್ರತಿಬಾರಿಯೂ ಗೆಲುವು ನಮ್ಮದೇ ಆಗಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ. ಆದರೆ, ಸೋಲುವುದೇ ಪರಿಪಾಠವಾಗಿಬಿಟ್ಟಾಗ, ತಂಡದಲ್ಲಿರ ಬಹುದಾದ ನ್ಯೂನತೆಗಳು ಹಾಗೂ ವ್ಯೂಹಾತ್ಮಕ ಕಾರ್ಯತಂತ್ರದ ಕೊರತೆ ಇತ್ಯಾದಿಗಳ ಬಗ್ಗೆ ಗಮನಹರಿಸಬೇಕಾಗಿ ಬರುತ್ತದೆ.
ಆರ್‌ಸಿಬಿ ತಂಡಕ್ಕೆ ಇಂಥದೊಂದು ಪರಿಷ್ಕರಣೆಯ ಅಗತ್ಯವಿದೆ ಎನಿಸುತ್ತದೆ. ಜತೆಗೆ, ಪ್ರತಿ ಬಾರಿಯ ಹರಾಜಿನಲ್ಲಿ ಆಟಗಾರರನ್ನು ತಂಡದ ತೆಕ್ಕೆಗೆ ತೆಗೆದುಕೊಳ್ಳುವಾಗಲೂ ಮತ್ತಷ್ಟು ಲೆಕ್ಕಾಚಾರವನ್ನು ಹಾಕಬೇಕಾದ ಅಗತ್ಯವಿದೆ ಅಂತಲೂ ಅಭಿಮಾನಿಗಳಿಗೆ ಮತ್ತು ಕ್ರೀಡಾ ವಿಶ್ಲೇಷಕರಿಗೆ ಅನಿಸುವುದು ಖರೆ. ಈ ಎಲ್ಲವನ್ನೂ ಸರಿಪಡಿಸಿಕೊಂಡು ಆರ್ ಸಿಬಿಯನ್ನು ಒಂದು ಸಮರ್ಥ ತಂಡವಾಗಿ ಕಟ್ಟಬೇಕಾದ ಅಗತ್ಯವಿದೆ. ಇದು ತಂಡದ ಸಹಭಾಗಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜತೆಗೆ, ಅಭಿಮಾನಿಗಳ ನಿರೀಕ್ಷೆಯನ್ನೂ ಈಡೇರಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ‘ರಾಯಲ್ ಚಾಲೆಂಜರ‍್ಸ್ ಬೆಂಗಳೂರು’ ಎಂಬ ಹೆಸರಿಟ್ಟುಕೊಂಡಿದ್ದರೂ ನಮ್ಮವರೇ ಆಟಗಾರರು ಈ ತಂಡದಲ್ಲಿ ಹೇಳಿಕೊಳ್ಳುವಷ್ಟರ ಸಂಖ್ಯೆಯಲ್ಲಿ ಇಲ್ಲದಿರುವುದು ಅಥವಾ ಅವರ ಸಂಪೂರ್ಣ ಅನುಪಸ್ಥಿತಿ ಕಾಡುತ್ತಿರುವುದು ಕೂಡ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಜತೆಗೆ ಕ್ರಿಸ್ ಗೇಲ್‌ರಂಥ ಆಟಗಾರ ತಂಡದಲ್ಲಿದ್ದಾಗ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದ ರೀತಿಗೂ ಈಗಿನ ರೀತಿಗೂ ಸಾಕಷ್ಟು ವ್ಯತ್ಯಾಸವಿದೆ. ರೋಚಕತೆಯೇ ಉಸಿರಾಗಿರುವ ಐಪಿಎಲ್‌ನಲ್ಲಿ, ಆರ್‌ಸಿಬಿ ತಂಡದವರು ಅದಕ್ಕೆ ಇಂಬು ಕೊಡದಿದ್ದರೆ ಹೇಗೆ?