Sunday, 3rd November 2024

ಆತ್ಮವಿಶ್ವಾಸ ಕಳೆದುಕೊಳ್ಳದೆ ಮರುಪರೀಕ್ಷೆಗೆ ಸಿದ್ದರಾಗಿ

ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ರಾಜ್ಯ ಸರಕಾರವು ಮರು ಪರೀಕ್ಷೆ ನಡೆಸಲು ಸಿದ್ಧವಾಗಿದೆ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗಿದೆ.

ಪರೀಕ್ಷೆ ಬರೆದ ೫೪೫ ಅಭ್ಯರ್ಥಿಗಳ ಪೈಕಿ ಕೆಲವರು ಮಾತ್ರ ಅಕ್ರಮವೆಸಗಿದ್ದಾರೆ ಎಂಬ ಸತ್ಯಾಂಶ ಪೊಲೀಸರ ತನಿಖೆಯಲ್ಲಿ ತಿಳಿಯುತ್ತಿದೆ. ಅಕ್ರಮವೆಸಗಿದವರಿಗೆ ಸೂಕ್ತ ಶಿಕ್ಷೆ ನೀಡುವುದು ಬಿಟ್ಟು ಪುನಃ ಪರೀಕ್ಷೆ ನಡೆಸುವುದು ನ್ಯಾಯೋಚಿತವಾದುದ್ದಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿ ಗಾಗಿ ಅಭ್ಯರ್ಥಿಗಳು ವರ್ಷಗಟ್ಟಲೇ ಕಷ್ಟಪಟ್ಟು ಓದಿ, ಪರೀಕ್ಷೆ ಬರೆದು ಯಶಸ್ವಿ ಯಾಗಿ, ಇನ್ನೇನು ಯಶಸ್ಸಿನ ಫಲ ಕೈಗೆ ಎಟುಕುತ್ತದೆ ಎನ್ನುವ ಹೊತ್ತಿಗೆ ಈ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದ್ದು, ವ್ಯವಸ್ಥೆಯ ಮೇಲೆಯೇ ನಿರಾಸೆ ಹುಟ್ಟಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ಹಳ್ಳಿಯನ್ನು ಬಿಟ್ಟು ಧಾರವಾಡ, ಬೆಂಗಳೂರಿನಂತಹ ಮಹಾನಗರ ಗಳಿಗೆ ಬಂದು ನೆಲೆಸಿ, ಅಲ್ಲಿ ತರಬೇತಿ ಪಡೆಯುತ್ತಾನೆ. ಪ್ರತಿ ತಿಂಗಳು ಹಣ ಪಾವತಿಸಿ ಗ್ರಂಥಾಲಯದ ಸದಸ್ಯತ್ವ ಪಡೆದು, ಓದುತ್ತಾನೆ. ಇದರ ಜತೆಗೆ ಊಟ, ಕೋಣೆ ಅಂತೆಲ್ಲ ತಿಂಗಳಿಗೆ ಕನಿಷ್ಠವೆಂದರೂ ಹತ್ತು ಸಾವಿರ ರುಪಾಯಿ ತಗುಲುತ್ತದೆ.

ಮಧ್ಯಮ ವರ್ಗದ ಕುಟುಂಬ ಗಳಿಗೂ ಸಾಧ್ಯವಾಗದ ಈ ಖರ್ಚು, ವೆಚ್ಚಗಳನ್ನು ಹೇಗೋ ಮಾಡಿ ಬಡ ಕುಟುಂಬದವರೂ ನಿಭಾಯಿಸಿ, ಎರಡು, ಮೂರು ವರ್ಷಗಳವರೆಗೆ ಕುಳಿತು ಓದಿದ್ದಾರೆ. ಪ್ರಯತ್ನಕ್ಕೆ ಪ್ರತಿಫಲ ಎಂಬತೆ ಕೊನೆಗೂ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಬರುವಂತೆ ಶ್ರಮಪಟ್ಟಿದ್ದಾರೆ. ಆದರೆ, ಇದೀಗ ಸರಕಾರ ಈ ಮರುಪರೀಕ್ಷೆಯ ನಿರ್ಧಾರ ಮಾಡಿರುವುದು ಇಷ್ಟು ದಿನ ಹಾಕಿದ ಶ್ರಮವೆಲ್ಲವೂ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

ಈಗಾಗಲೇ ನ್ಯಾಯವಾಗಿ ಪಾಸಾದವರು ಕೆಲಸ ಸಿಕ್ಕಿತು ಎಂದು ರಿಲ್ಯಾಕ್ಸ್ ಆಗಿದ್ದಾರೆ. ಒಮ್ಮೆ ರಿಲ್ಯಾಕ್ಸ್ ಆದ ಮನಸ್ಸು ಮತ್ತದೇ ಒತ್ತಡಕ್ಕೆ ಸಿಲುಕಿ ಸಿದ್ಧಗೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಅಧಿಕಾರದ ಗದ್ದುಗೆಯಲ್ಲಿ ಕುಳಿತವರಿಗೆ ಆ ಅಭ್ಯರ್ಥಿಗಳ ಮನಸ್ಥಿತಿ ಅರಿಯುವ ವ್ಯವಧಾನವಿಲ್ಲದಿರುವುದು ಬೇಸರ ಸಂಗತಿ. ಈ ವ್ಯವಸ್ಥೆಯೇ ಹೀಗೆ. ಅಭ್ಯರ್ಥಿಗಳು ಯಾವ ಹಂತದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಮರುಪರೀಕ್ಷೆಗೆ ಸಿದ್ಧರಾಗಬೇಕಿದೆ.