Sunday, 15th December 2024

ಪ್ರಾದೇಶಿಕ ಭಾಷೆಗೆ ಆದ್ಯತೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸಮಿತಿಯು ತನ್ನ ೧೧ನೇ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದು, ಎಲ್ಲ ರಾಜ್ಯಗಳಲ್ಲಿಯೂ ಇಂಗ್ಲಿಷ್‌ಗಿಂತ ಸ್ಥಳೀಯ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ವರದಿಯಲ್ಲಿ ಹೇಳಿದೆ.

ಆದರೆ ಬಹುತೇಕರು ಈ ವರದಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು, ಇದೊಂದು ಹಿಂದಿ ಹೇರಿಕೆಯ ತಂತ್ರ ಎಂದು ಬಿಂಬಿಸುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಐಐಟಿಯಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು. ಹಿಂದಿ ಭಾಷಿಕ ಪ್ರದೇಶದಲ್ಲಿ ಹಿಂದಿಯನ್ನೂ, ಇತರ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆ ಯನ್ನೂ ಬಳಸಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಬಳಕೆಯನ್ನು ಐಚ್ಛಿಕಗೊಳಿಸಬೇಕು ಎಂದು ವರದಿಯಲ್ಲಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾ ಗಿದೆ.

ಆದರೆ ರಾಜಕೀಯ ದುರುದ್ದೇಶದಿಂದ ಹಲವರು ಈ ವರದಿಯ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷಾ ಮಾಧ್ಯಮಕ್ಕೆ ಒಗ್ಗಿಕೊಳ್ಳದೇ ಐಐಟಿಯಂತಹ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವುದನ್ನು ಕೈಬಿಟ್ಟಿದ್ದಾರೆ. ವೈದ್ಯಕೀಯ ಶಿಕ್ಷಣವನ್ನೂ ಸ್ಥಳೀಯ ಭಾಷೆಗಳಲ್ಲೇ ಬೋಧಿಸಬೇಕು ಎಂಬ ಕೂಗು ಬಹಳ ದಿನಗಳಿಂದ ಇರುವುದು ಇದೇ ಕಾರಣಕ್ಕೆ.

ಹೀಗಿದ್ದಾಗ, ಇದೀಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಬೋಽಸಬೇಕು ಎಂದು ಶಿಫಾರಸು ಮಾಡಿದ್ದರಲ್ಲಿ ತಪ್ಪೇನಿದೆ? ಹಿಂದಿ ಭಾಷೆಯನ್ನು ಮಾತನಾಡುವ ರಾಜ್ಯಗಳಲ್ಲಿ ಹಿಂದಿ ಮಾಧ್ಯಮದಲ್ಲಿ ಬೋಧಿಸಿದರೆ, ಹಿಂದಿಯೇತರ ಮಾತನಾಡುವ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ,
ತೆಲಂಗಾಣ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಲ್ಲೇ ಬೋಧಿಸಲಾಗುತ್ತದೆ.

ಇಂಗ್ಲಿಷ್ ಅನ್ಯ ಭಾಷೆ ಮತ್ತು ಅದನ್ನು ನಿರ್ಮೂಲನ ಮಾಡಲೇಬೇಕಿದೆ. ಹೀಗಾಗಿ ಅದರ ಸ್ಥಾನದಲ್ಲಿ ಪ್ರಾದೇಶಿಕ ಭಾಷೆಗಳನ್ನು
ಸ್ಥಾಪಿಸಲೇಬೇಕಿದೆ. ಆ ನಿಟ್ಟಿನಲ್ಲಿ ಸಂಸದೀಯ ಸಮಿತಿಯ ವರದಿ ಸರಿಯಾಗಿದ್ದು, ಅದರ ಕುರಿತು ತಪ್ಪು ಸಂದೇಶ ರವಾನಿಸುವುದನ್ನು ನಿಲ್ಲಿಸಬೇಕಿದೆ.