Sunday, 15th December 2024

ಮಕ್ಕಳ ಮನಸ್ಸಿಗೆ ಸ್ಪಂದಿಸಿ

ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೆಚ್ಚುತ್ತಿದ್ದು, 2022, ಜನವರಿಯಿಂದ ಜುಲೈ ವರೆಗೂ ರಾಜ್ಯದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂದುವರಿದ ಜಿಲ್ಲೆಗಳಾದ ಬೆಂಗಳೂರು, ಮಂಗಳೂರು, ತುಮಕೂರು, ಮೈಸೂರು ಜಿಲ್ಲೆಗಳ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ವರದಿಯಾಗಿದೆ. ಇವೆಲ್ಲವೂ ಕ್ಷುಲ್ಲಕ ಕಾರಣಕ್ಕೆ ನಡೆದ ಆತ್ಮಹತ್ಯೆಗಳು. ಜೂನ್ 12 ರಂದು ತಾಯಿಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಶಾಲೆಯ ವಾರ್ಡನ್ ಮೊಬೈಲ್ ನೀಡ ಲಿಲ್ಲ ಎಂಬ ಕಾರಣಕ್ಕೆ ಹೊಸಕೋಟೆ ಮೂಲದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ.

ಇತ್ತೀಚೆಗೆ ನಡೆದ ಬಹುತೇಕ ಆತ್ಮಹತ್ಯೆಗಳು ಇಂತಹ ಕ್ಷುಲ್ಲಕ ಕಾರಣಕ್ಕೇ ಎನ್ನಲಾಗಿದೆ. ಮಕ್ಕಳು ಚೆನ್ನಾಗಿ ಓದಿ, ಒಳ್ಳೆಯ ಅಂಕ ಪಡೆಯಬೇಕು, ಹೆಚ್ಚಿನ ಸಂಬಳ ದೊರೆಯುವ ನೌಕರಿ ಪಡೆಯಬೇಕೆಂಬ ಆಕಾಂಕ್ಷೆ ಇಂದಿನ ಪೋಷಕರಲ್ಲಿ ಹೆಚ್ಚು ತೀವ್ರವಾಗಿದೆ.

ಇದು ತಪ್ಪೇನಲ್ಲ. ಆದರೆ ಈ ದಿಸೆಯಲ್ಲಿ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿ, ಉತ್ತಮ ವಿದ್ಯೆ ಕೊಡಿಸಲು ಅವರನ್ನು ವಸತಿಶಾಲೆಗೆ ಸೇರಿಸುವ ಮುನ್ನ ಒಂದಷ್ಟು ಯೋಚಿಸುವುದು ಒಳ್ಳೆಯದು. ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗ ಅವರ ಜತೆ ಒಡನಾಟ, ಆಟ, ಪಾಠ, ಸಂವಹನ ಪೋಷಕರಿಗೆ ಖುಷಿ, ಸಂತಸ ನೀಡುತ್ತವೆ.

ಮಕ್ಕಳ ಜತೆಗಿನ ಇಂತಹ ಖುಷಿಯ ಕ್ಷಣಗಳು ಪೋಷಕರು ತಮ್ಮೊಳಗೆ ಸದಾ ಕಾಪಿಟ್ಟುಕೊಳ್ಳಬೇಕಾದಂತಹವು. ಮಕ್ಕಳಿಗೂ ತಮ್ಮ ತಂದೆ, ತಾಯಿ, ಸಹೋದರ, ಸಹೋದರಿಯರ ಜತೆಗಿನ ಬಾಲ್ಯದ ಒಡನಾಟದ ಕ್ಷಣಗಳು ಅವರ ಜೀವನದ ಅಮೂಲ್ಯ ಕ್ಷಣ ಗಳಾಗಿರುತ್ತವೆ. ಪೋಷಕರು ಮತ್ತು ಮಕ್ಕಳಿಗೆ ಇಂತಹ ಅವಿಸ್ಮರಣೀಯ ಕ್ಷಣಗಳಿಗೆ ಅವಕಾಶ ದೊರೆಯದಂತೆ ಮಕ್ಕಳನ್ನು ಎಳವೆಯ ವಸತಿಶಾಲೆಗಳಿಗೆ ಸೇರಿಸುವುದು ಸೂಕ್ತವಲ್ಲ. ಮಕ್ಕಳ ಜತೆ ನಿಯಮಿತವಾಗಿ ಸಮಯ ಕಳೆಯುತ್ತಾ ಇದ್ದರೆ ಅವರ ಮನಃಸ್ಥಿತಿಯ ಅರಿವು ಪೋಷಕರಿಗೆ ಇರುತ್ತದೆ.

ಮಕ್ಕಳ ಮಾತುಗಳಿಗೆ ಕಿವಿಯಾಗಿ, ಅವರ ಭಾವನೆಗಳಿಗೆ ಹೃದಯವನ್ನು ಮುಕ್ತವಾಗಿ ತೆರೆದಿಟ್ಟಲ್ಲಿ ಕಾಲಕಾಲಕ್ಕೆ ಅವರು ನೀಡುವ ಸೂಕ್ಷ್ಮ ಸಂದೇಶಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಮಕ್ಕಳು ನೀಡುವ ಇಂತಹ ಸಂದೇಶಗಳನ್ನು ಸಕಾಲದಲ್ಲಿ ಗ್ರಹಿಸಿ, ಸ್ಪಂದಿಸುವುದು ಪೋಷಕರ ಮೊದಲ ಆದ್ಯತೆಯಾಗಬೇಕು.