ಮತ್ತೊಮ್ಮೆ ರಾಜ್ಯದಲ್ಲಿ ಶಿಕ್ಷಣವನ್ನು ರಾಜಕೀಕರಣಗೊಳಿಸುವ ದುರದೃಷ್ಟಕರ ಬೆಳವಣಿಯ ಸೂಚನೆ ಕಂಡಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಸುಧಾ ರಣೆಗೆ ಆದ್ಯತೆ ಕೊಡಲಾಗುತ್ತಿದ್ದು, ಶಾಲಾ ಪಠ್ಯವನ್ನು ಹಂತಹಂತವಾಗಿ ಬದಲಾಯಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳುವ ಮೂಲಕ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರಕಾರ, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆ ಯನ್ನು ಸಂಪೂರ್ಣ ತೆಗೆದುಹಾಕಿ, ತಮ್ಮ ಮೂಗಿನ ನೇರಕ್ಕೆ ಪುನರ್ ಮುದ್ರಿಸುವ ಸೂಚನೆ ನೀಡಿದೆ.
ಇದಕ್ಕೆ ಪೂರಕವಾಗಿ ಸಮಾನ ಮನಸ್ಕರ ಒಕ್ಕೂಟದಡಿ ಕೆಲ ಸಾಹಿತಿಗಳು, ಚಿಂತಕರು ಮುಖ್ಯಮಂತ್ರಿ ಸಿದ್ದರಾಮ ಯ್ಯನವರನ್ನು ಭೇಟಿ ಮಾಡಿ, ಪಠ್ಯದಲ್ಲಿರುವ ‘ಅವೈeನಿಕ ವಿಚಾರ’ಗಳನ್ನು ತೆಗೆದುಹಾಕುವಂತೆ ಮನವಿ ಸಲ್ಲಿಸಿ ದ್ದಾರೆ. ಹಿಂದೆ ಬರಗೂರು ರಾಮಚಂದ್ರಪ್ಪ ಸಮಿತಿ ಮೂಲಕ ಕಾಂಗ್ರೆಸ್ ಸರಕಾರ ಪಠ್ಯ ಪರಿಷ್ಕರಣೆ ನಡೆಸಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪಠ್ಯದಲ್ಲಿ ಎಡಪಂಥೀಯ ಚಿಂತನೆಗಳನ್ನು ತುರುಕಲಾಗಿದೆ ಎಂದು
ಆರೋಪಿಸಿ, ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯವನ್ನು ಪುನರ್ ಪರಿಷ್ಕರಿಸಿತು.
ಇದೀಗ ಪಠ್ಯದಲ್ಲಿ ಬಲಪಂಥೀಯ ಸಿದ್ಧಾಂತ ತುರುಕಿ, ‘ಶಿಕ್ಷಣದ ಕೇಸರೀಕರಣ’ ಮಾಡಲಾಗಿದೆ ಎಂಬ ಕಾರಣಕ್ಕೆ ಮತ್ತೊಂದು ‘ಪರಿಷ್ಕರಣೆಯ ರಾಜಕೀಯ’ಕ್ಕೆ ಕಾಂಗ್ರೆಸ್ ಸರಕಾರ ನಾಂದಿ ಹಾಡಲು ಹೊರಟಿದೆ. ದೇಶದ ಭವಿಷ್ಯದ ನಾಗರಿಕರನ್ನು ಸಿದ್ಧಪಡಿಸುವ, ಜ್ಞಾನಾರ್ಜನೆಗೆ ಪೂರಕವಾಗ ಬೇಕಿದ್ದ ಶಿಕ್ಷಣದ ವಿಚಾರದಲ್ಲಿ ಇತ್ತೀಚಿನ ವರ್ಷ ಗಳಲ್ಲಿ ಸ್ವಾರ್ಥ ರಾಜಕೀಯದ ಮೇಲಾಟವೇ ಢಾಳಾಗಿ ಕಂಡು ಬರುತ್ತಿದೆ. ಪ್ರತಿ ಸರಕಾರಗಳೂ ಬಂದಾಗಲೂ ‘ವಾಸ್ತವ’ ತಿಳಿಸುವ ಹೆಸರಿನಲ್ಲಿ ತಂತಮ್ಮ ರಾಜಕೀಯ ಸಿದ್ಧಾಂತಗಳನ್ನು ಮಕ್ಕಳ ಮೇಲೆ ಹೇರಲು ಹಣಿಸುತ್ತಿರುವುದು ದುರದೃಷ್ಟಕರ.
ವಿವಾದಗಳಲ್ಲೇ ಕಳೆಯುತ್ತಿರುವ ಶಿಕ್ಷಣದಲ್ಲಿ ಗುಣಮಟ್ಟ, ಮೌಲ್ಯ, ಪರೀಕ್ಷಾ ಸುಧಾರಣೆ, ಬೋಧನಾ ಕ್ರಮದ ಕ್ರಿಯಾಶೀಲತೆಗಳೆಲ್ಲಿನ ಮಾತು? ಇನ್ನು ಮೂಲಸೌಕರ್ಯ, ಶಿಕ್ಷಕ-ಸಿಬ್ಬಂದಿ ನೇಮಕದಂಥ ವಿಷಯಗಳು, ಖಾಸಗಿ ಶಾಲೆಗಳ ’ದಂಧೆ’ಗಳಂಥ ವಿಚಾರಗಳ ಬಗ್ಗೆ ಯೋಚಿಸಲೇ ನಮ್ಮ ಸರಕಾರಗಳಿಗೆ ಪುರುಸೊತ್ತಿಲ್ಲ. ಸಂವಿಧಾನದ ಪ್ರಕಾರ ಮೂಲಭೂತ ಹಕ್ಕಾಗಿರುವ ಶಿಕ್ಷಣದ ಆಶಯ ಈ ದೊಂಬರಾಟದಲ್ಲಿ ಸಾಕಾರಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಇನ್ನು ಎನ್‌ಇಪಿ ಜಾರಿಯ ಬಗೆಗೂ ರಾಜಕೀಯದ ಮಾತುಗಳು ಕೇಳಿಬಂದಿವೆ.
ಹಿಂದಿನ ಬಿಜೆಪಿ ಸರಕಾರ, ೨೦೨೧-೨೨ರಿಂದ ಉನ್ನತ ಶಿಕ್ಷಣದಲ್ಲಿ ಎನ್‌ಇಪಿ ಜಾರಿಗೊಳಿಸಿದ್ದು, ಅದಕ್ಕೆ ತಕ್ಕಂತೆ ಕೋರ್ಸ್‌ಗಳಿಗೆ ಹೊಸ ಸ್ವರೂಪ ನೀಡಿ,
ಹೊಸ ಪಠ್ಯಕ್ರಮವನ್ನೂ ರಚಿಸಿ, ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ವಿಷಯಗಳ ಆಯ್ಕೆಯನ್ನೂ ಒದಗಿಸಿದೆ. ಈಗಾಗಲೇ ಮತ್ತೊಂದು ಶೈಕ್ಷಣಿಕ ವರ್ಷವೂ ಆರಂಭವಾಗಿದೆ. ಹೀಗಿರುವಾಗ ಈಗ ಅದನ್ನು ಹಿಂಪಡೆವ ರಾಜಕೀಯ ಹೇಳಿಕೆಗಳು ಅನಗತ್ಯವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕೊನೆ ಪಕ್ಷ ಶಿಕ್ಷಣದ ವಿಚಾರದಲ್ಲಾದರೂ ಇಂಥ ಪಕ್ಷ ರಾಜಕೀಯ ಮಾಡದೇ, ನಲಿಯುತ್ತ ಕಲಿಯುವ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಲಿ. ಇದು ಆಡಳಿತದ ಹೊಣೆ.