Wednesday, 11th December 2024

ಆರಂಭ ಶೂರತ್ವ ಆಗದಿರಲಿ

ಕಂದಾಯ ದಾಖಲೆಗಳನ್ನು ಪಡೆಯಲು ಸರಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರಕಾರವು ‘ರೈತರ ಮನೆ
ಬಾಗಿಲಿಗೆ ಕಂದಾಯ ದಾಖಲೆ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸ್ವಾಗ ತಾರ್ಹ.

ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಇಲಾಖೆಯ ಬಗ್ಗೆ ಜನರಿಗೆ ಒಂದಿಷ್ಟು ಭರವಸೆ ಮೂಡುವುದರಲ್ಲಿ ಸಂದೇಹವಿಲ್ಲ. ಆದರೆ, ಇದು ಆರಂಭ ಶೂರತ್ವ ಆಗಬಾರದು. ಯಾವುದೇ ಲೋಪ ಆಗದಂತೆ ಯೋಜನೆಯನ್ನು ಜಾರಿಗೊಳಿಸುವ ಹೊಣೆ ಇಲಾಖೆಯ ಮೇಲಿದೆ. ‘ಜಿಽಕಾರಿಗಳ ನಡೆ ಹಳ್ಳಿಯ ಕಡೆ’, ‘ಮನೆ ಬಾಗಿಲಿಗೆ ಪಿಂಚಣಿ’ಯಂತಹ ಕಾರ್ಯಕ್ರಮಗಳನ್ನು ಈ ಹಿಂದೆಯೇ ಕಂದಾಯ ಇಲಾಖೆ ಆರಂಭಿಸಿತ್ತು. ಆದರೆ ಅವ್ಯಾವವೂ ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ.

ಕಂದಾಯ ಇಲಾಖೆ ಈ ಹಿಂದೆ ಕಂದಾಯ ಅದಾಲತ್‌ಗಳನ್ನು ನಡೆಸಿತ್ತು. ಅಧಿಕಾರಿಗಳ ನಿರಾಸಕ್ತಿಯಿಂದ ಈ ಕಾರ್ಯಕ್ರಮ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಜನಕಲ್ಯಾಣದ ಉದ್ದೇಶದಿಂದ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಆರಂಭದಲ್ಲಿ ಈ ಯೋಜನೆಗಳು ಸರಾಗವಾಗಿ ನಡೆಯುತ್ತವೆ. ಬಳಿಕ ಅವು ಉತ್ಸಾಹ ಕಳೆದುಕೊಳ್ಳುತ್ತವೆ. ಅನುಷ್ಠಾನದ ಮೌಲ್ಯಮಾಪನ ನಡೆಯುವುದಿಲ್ಲ. ಕ್ರಮೇಣ ಇದ್ದೂ ಇಲ್ಲದಂತೆ ಆಗುತ್ತವೆ. ಇದಕ್ಕೆ ಉದಾಹರಣೆ ‘ಸಕಾಲ’ ಯೋಜನೆ. 2011ರಲ್ಲಿ ‘ಸಕಾಲ’ ಯೋಜನೆಯನ್ನು ಬಹಳ ಆಸಕ್ತಿಯಿಂದ ಜಾರಿಗೆ ತರಲಾಯಿತು.

ಆದರೆ, ಇದೀಗ ಸಕಾಲ ಯೋಜನೆಯಡಿ ಸೇವೆ ಪಡೆಯಲು 4.17 ಲಕ್ಷ ಅರ್ಜಿಗಳು ಅವಧಿ ಮೀರಿ ಈಗ ಬಾಕಿ ಉಳಿದುಕೊಂಡಿವೆ. ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆಯೂ ಸಕಾಲದ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯ ಇದೆ. ಸಾಮಾನ್ಯ ವ್ಯಕ್ತಿಯೊಬ್ಬ ಕಂದಾಯ ಇಲಾಖೆಯಲ್ಲಿ ಸಣ್ಣಪುಟ್ಟ ದಾಖಲೆಗಳನ್ನು ಪಡೆಯಲು ತಿಂಗಳುಗಟ್ಟಲೆ ಅಲೆದಾಡುವುದು ತಪ್ಪಬೇಕಿದೆ. ಲಂಚ ನೀಡದೆ ಯಾವುದೇ ದಾಖಲೆ ಸಿಗುವುದಿಲ್ಲ ಎಂಬ ಸ್ಥಿತಿ ತೊಲಗಬೇಕಿದೆ. ಅಧಿಕಾರಿಗಳ ಮನೋಭಾವ ಬದಲಾಗದ ಹೊರತು
ವ್ಯವಸ್ಥೆಯಲ್ಲಿ ಸುಧಾರಣೆಯಾಗದು. ನೌಕರಶಾಹಿಯ ವಿಳಂಬ ಧೋರಣೆಗೆ ಕಡಿವಾಣ ಹಾಕಿ, ಕಾಲಮಿತಿಯಲ್ಲಿ ಅರ್ಜಿಗಳು ವಿಲೇವಾರಿ ಆಗುವಂತೆ ಸರಕಾರ ನೋಡಿಕೊಳ್ಳಬೇಕು.

ಅದಕ್ಕಾಗಿಯೇ ತಾಲೂಕು ಮಟ್ಟದಲ್ಲಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಿ, ಕಾಲ ಕಾಲಕ್ಕೆ ಸಭೆ ನಡೆಸಿ, ಬಾಕಿ ಅರ್ಜಿಗಳ ಕುರಿತು ಪರಿಶೀಲನೆ ನಡೆಸಬೇಕು.