Thursday, 12th December 2024

ರಿಷಿಗೆ ಕಡಿಮೆ ಅವಧಿ, ಸವಾಲು ಹೆಚ್ಚು

ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತ ಮೂಲದ ರಿಷಿ ಸುನಕ್ ಅವರು ಲಂಡನ್‌ನ ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ದೀಪಾವಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು, ‘ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ಕನಸಿನ ದೀಪಗಳನ್ನು ಬೆಳಗಿಸುವ ಬ್ರಿಟನ್ ಅನ್ನು ನಿರ್ಮಿಸುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದು, ಇದು ಅವರ ಗಟ್ಟಿತನ ವನ್ನು ಎತ್ತಿ ತೋರಿಸಿದೆ.

ಬ್ರಿಟನ್ ಆರ್ಥಿಕವಾಗಿ ಅತೀವ ಸಂಕಷ್ಟದಲ್ಲಿರುವ ಮತ್ತು ರಾಜಕೀಯವಾಗಿ ಚಂಚಲ ಹಾಗೂ ಅಸ್ಥಿರವಾಗಿರುವ ಈ ಹೊತ್ತಿನಲ್ಲಿ ರಿಷಿ ಸುನಕ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಿಷಿ ಅವರ ಮುಂದೆ ಹತ್ತು ಹಲವು ಸವಾಲುಗಳಿವೆ. ಲಿಜ್ ಟ್ರಸ್ ಅವರ ಅವಽಯಲ್ಲಿ ಮಂಡಿಸಲಾದ ಕಿರು ಬಜೆಟ್‌ನ ಪರಿಣಾಮವಾಗಿ ತತ್ತರಗೊಂಡ ಅರ್ಥ ವ್ಯವಸ್ಥೆಯನ್ನು ಅವರು ಸರಿದಾರಿಗೆ ತರಬೇಕಿದೆ. ಹಣದುಬ್ಬರವನ್ನು ನಿಯಂತ್ರಿಸಬೇಕಿದೆ ಮತ್ತು ಆರ್ಥಿಕ ಹಿಂಜರಿತದ ಅಪಾಯವನ್ನು ತಪ್ಪಿಸ ಬೇಕಿದೆ.

ಇಂಧನ ದರದಲ್ಲಿ ಆಗಿರುವ ಭಾರಿ ಏರಿಕೆ, ಬಡ್ಡಿ ದರದ ತೀವ್ರ ಹೆಚ್ಚಳವು ದೇಶದ ಆರ್ಥಿಕತೆಯನ್ನು ಬಾಧಿಸಿದೆ. ಹಾಗೆಯೇ ಅದು ಕುಟುಂಬ ನಿರ್ವಹಣೆಯ ವೆಚ್ಚವನ್ನು ಆಗಸಕ್ಕೇರಿಸಿದೆ. ಇದನ್ನು ಸರಿಪಡಿಸಬೇಕಿದೆ. ರಾಷ್ಟ್ರೀಯ ಆರೋಗ್ಯ ಸೇವೆಯು ಮರುಚಾಲನೆ ಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಈ ಹಿಂದೆ ಆಳ್ವಿಕೆ ನಡೆಸಿದ ಕೆಲವರು ಈ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸ ಲಿಲ್ಲ. ಲಿಜ್ ಟ್ರಸ್ ಅವರ ಪ್ರಯೋಗಗಳು ಫಲ ಕೊಡಲಿಲ್ಲ.

ಮಾತ್ರವಲ್ಲ ಅವು ಸಮಸ್ಯೆಗಳನ್ನು ಇನ್ನಷ್ಟು ಗೋಜಲುಗೊಳಿಸಿದವು. ಹಣಕಾಸಿನ ಕುರಿತು ಅರಿವು ಇರುವ ವೃತ್ತಿಪರ ವ್ಯಕ್ತಿ ಎಂಬ ಖ್ಯಾತಿ ರಿಷಿ ಅವರಿಗೆ ಇದೆ. ಹಾಗೆಯೇ ಹಣಕಾಸು ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಕೋವಿಡ್ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಿದ್ದರು ಎಂದೂ ಜನರು ಅವರನ್ನು ಹೊಗಳಿದ್ದಾರೆ. ಆದರೆ, ರಿಷಿ ಅವರಿಗೆ ಬಹಳಷ್ಟು ಸಮಯವೇನೂ ಇಲ್ಲ. 2025ರ ಜನವರಿಯಲ್ಲಿ ಚುನಾವಣೆ ಇದೆ. ಅಷ್ಟರಲ್ಲೇ ದೇಶದ ಆರ್ಥಿಕ ಸ್ಥಿತಿಯನ್ನು ತಹಬದಿಗೆ ತರಬೇಕಿದೆ. ಆ ವ್ಯಕ್ತಿತ್ವ, ಗಟ್ಟಿತನ ರಿಷಿ ಸುನಕ್ ಅವರಿಗೆ ಇದೆ.