Thursday, 12th December 2024

ರಸ್ತೆ ರಂಪಾಟಕ್ಕೆ ನಿಯಂತ್ರಣ ಅಗತ್ಯ

ವೈಯಕ್ತಿಕ ಮಟ್ಟದಲ್ಲಿ ಕಿರಿಕಿರಿ ಮಾಡಿಕೊಂಡು ಜಗಳವಾಡುತ್ತಿದ್ದವರು ಎಲ್ಲರೆದುರು ಜಗಳವಾಡತೊಡಗಿದಾಗ ಬೀದಿ ರಂಪ, ಹಾದಿ ರಂಪ ಮಾಡಿದ ರೆಂದು ಹೇಳುವುದು ರೂಢಿ. ಆದರೆ ಇಂಗ್ಲಿಷಿನ ‘ರೋಡ್‌ರೇಜ್’ ಪದಕ್ಕೆ ಇದನ್ನು ಪರ‍್ಯಾಯವಾಗಿ ಬಳಸಿದರೆ ವಾಹನ ಸವಾರರ ರಂಪಾಟ ಇದೀಗ ಕೊಲೆ ಮಾಡುವಷ್ಟರ ಮಟ್ಟಿಗೆ ಹೋಗಿರುವುದು ಕಳವಳದ ವಿಚಾರ.

ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಇಳಿಸಂಜೆ ತನ್ನ ಕಾರಿಗೆ ಬೈಕ್ ತಾಗಿದ್ದಕ್ಕೆ ಕೋಪಗೊಂಡ ಚಾಲಕ ಕಾರನ್ನು ಡಿಕ್ಕಿ ಹೊಡೆಸಿ ಡೆಲಿವರಿ ಬಾಯ್‌ಯಾಗಿದ್ದ ಬೈಕ್ ಸವಾರನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಇದೇ ದಿನ ಸರ್ಜಾಪುರ ರಸ್ತೆಯಲ್ಲಿ ಸಣ್ಣ ಮಗುವಿ ನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಕುಟುಂಬವನ್ನು ತಡೆದ ಕಾರು ಚಾಲಕನೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಕಾರಿನ ಮುಂಭಾಗದ ಗಾಜು ಒಡೆಯಲು ಮುಂದಾದ ಘಟನೆ ವೈರಲ್ ಆಗಿದೆ.

ರಾಜ್ಯದಲ್ಲಿ, ರಾಷ್ಟ್ರದಲ್ಲಿ ಪ್ರತಿದಿನವೂ ರಸ್ತೆ ರಂಪಾಟದ ನೂರಾರು ಘಟನೆಗಳು ನಡೆಯುತ್ತಲೇ ಇವೆ. ವಾಹನ ಚಾಲನೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ದಿನ, ರಂಪಾಟದ ಕಹಿ ಅನುಭವ ಆಗಿಯೇ ತೀರುತ್ತದೆ. ಯಾರೋ ಓವರ್‌ಟೇಕ್ ಮಾಡಿದರು, ಓವರ್‌ಟೇಕ್ ಮಾಡಲು ಸೈಡ್ ಕೊಡ ಲಿಲ್ಲ, ಇನ್ನಾರೋ ಹಿಂಬದಿಯಿಂದ ಹಾರ್ನ್ ಮಾಡಿದರು, ಸಿಗ್ನಲ್‌ನಲ್ಲಿ ಅಡ್ಡ ಬಂದರು, ಅತಿ ವೇಗ ಅಥವಾ ನಿಧಾನವಾಗಿ ಹೋಗುತ್ತಿದ್ದರು, ಗಾಡಿ ಟಚ್ ಮಾಡಿದರು ಹೀಗೆ ವಾಹನ ಸವಾರರ ಮಧ್ಯೆ ಬೆಂಕಿ ಹತ್ತಿಕೊಳ್ಳಲು ನಿರ್ದಿಷ್ಟ ಕಾರಣಗಳು ಬೇಕಿಲ್ಲ.

ಕೆಲವೊಮ್ಮೆ ಇವು ಉದ್ದೇಶಪೂರ್ವಕವೂ ಇರುತ್ತವೆ. ಅನುಭವಿ ಚಾಲಕರು, ಮಾಲೀಕರು ಇಂತಹ ಘಟನೆಗಳು ನಡೆದಾಗ ಸಿಟ್ಟಿನಿಂದ ಮುನ್ನುಗ್ಗುವ ವ್ಯಕ್ತಿಯನ್ನು ಸಮಾಧಾನಿಸಿ ಕಳುಹಿಸುತ್ತಾರೆ. ಅನಿವಾರ‍್ಯವಾದಾಗ ಪೊಲೀಸರನ್ನು ಕರೆಸಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಸ್ವಲ್ಪ ತಾಳ್ಮೆ ವಹಿಸಿ, ವಿವೇಕ, ಬಳಸಿದರೆ ಇಂತಹ ಪ್ರಕರಣಗಳನ್ನು ವಿಕೋಪಕ್ಕೆ ಹೋಗದಂತೆ ತಡೆಯಬಹುದು. ಇಲ್ಲದೇ ಹೋದರೆ ಪ್ರಕರಣ ಕೊಲೆ ತನಕವೂ ಮುಂದು ವರಿಯಬಹುದು.

ನಮ್ಮಲ್ಲಿ ಚಾಲಕರ ಪರವಾನಗಿ ಪತ್ರ ನೀಡಲು ವಾಹನ ಹೇಗೆ ಚಲಾಯಿಸಬೇಕೆನ್ನುವುದಷ್ಟೇ ಮುಖ್ಯವಾಗುತ್ತದೆ. ಚಲಾಯಿಸುವವರ ವರ್ತನೆ ಹೇಗಿರ
ಬೇಕೆಂದು ಎಲ್ಲೂ ಹೇಳುವುದಿಲ್ಲ. ಸಣ್ಣದಾಗಿ ಕೆಮ್ಮಿದರೂ ಮುಖ ಸಿಂಡರಿಸುವ ಯುವ ಪೀಳಿಗೆಗೆ ತಾಳ್ಮೆ,ಸಂಯಮದ ಶಿಕ್ಷಣ ಕಲಿಸದೇ ಹೋದರೆ
ಇಂತಹ ಅನಾಹುತಗಳು ನಿತ್ಯದ ಘಟನೆಗಳಾಗಬಹುದು. ಮನೆಯಲ್ಲಿ ಹಿರಿಯರು ಹೇಳುವ ‘ಜಾಗ್ರತೆ, ಹುಶಾರು’ ಎಂಬ ಪದದ ಹಿಂದೆ, ವಾಹನ ಮಾತ್ರ ವಲ್ಲ, ನಮ್ಮ ನಿಯಂತ್ರಣವೂ ತಪ್ಪದಿರಲಿ ಎಂಬ ಕಳಕಳಿ ಇರುತ್ತದೆ. ರಸ್ತೆಗೆ ಇಳಿದವರಿಗೆ ವಾಹನದ ಜತೆ ಸ್ವನಿಯಂತ್ರಣವೂ ಅಗತ್ಯ.