Thursday, 12th December 2024

ಮಾತುಕತೆಯಿಂದ ಬಗೆಹರಿಯಲಿ

ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಲು ದೇಶದ ಹೊರಗೆ ಸೇನೆ ಬಳಸಲು ರಷ್ಯಾ ಸಂಸತ್ ಅನುಮತಿ ನೀಡುತ್ತಿದ್ದಂತೆ ಉಕ್ರೇನ್ ಮೇಲೆ ತನ್ನ ಸ್ವಾಧೀನ ಸಾಧಿಸಲು ಪ್ರಯತ್ನಿಸುತ್ತಿರುವ ರಷ್ಯಾ, ದಿನದಿಂದ ದಿನಕ್ಕೆ ಅದರ ಗಡಿಯ ಹತ್ತಿರ ಸಾಗು ತ್ತಿದೆ.

ನೈಋತ್ಯ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಅದು ಉಕ್ರೇನ್‌ನಿಂದ ಕೇವಲ 20 ಕಿಮೀ ದೂರದಲ್ಲಿದೆ. ದಕ್ಷಿಣ ಬೆಲಾರಸ್‌ನ ಭಾಗದಲ್ಲಿ ಕೂಡ ಗಡಿಯಿಂದ 40 ಕಿಮೀ ದೂರದಲ್ಲಿ ರಷ್ಯಾ ತನ್ನ ಸೇನೆಗಳನ್ನು ನಿಯೋಜಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಆಸ್ಪತ್ರೆ ನಿರ್ಮಿಸಿದೆ ಎನ್ನುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ ಎಂದು ವರದಿಯಾಗಿದೆ. ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ರಷ್ಯಾ ವಿರುದ್ಧ ಸರಣಿ ನಿರ್ಬಂಧಗಳನ್ನು ಘೋಷಿಸಿದ್ದಾರೆ.

ಈಗಾಗಲೇ ರಷ್ಯಾದ ಎರಡು ದೊಡ್ಡ ಹಣಕಾಸು ಸಂಸ್ಥೆಗಳಾದ ವಿಇಬಿ ಮತ್ತು ಅವರ ಮಿಲಿಟರಿ ಬ್ಯಾಂಕ್‌ಗಳ ಮೇಲೆ ಪೂರ್ಣ ನಿರ್ಬಂಧ ಗಳನ್ನು ಜಾರಿಗೊಳಿಸಲಾಗಿದೆ. ರಷ್ಯಾದ ಸಾರ್ವಭೌಮ ಸಾಲದ ಮೇಲೆ ಸಮಗ್ರ ನಿರ್ಬಂಧಗಳನ್ನು ಹೇರಲಾಗಿದೆ. ಒಟ್ಟಾರೆ ರಷ್ಯಾದ ಸರಕಾರಕ್ಕೆ ಪಾಶ್ಚಿಮಾತ್ಯ ಹಣಕಾಸು ಸೌಲಭ್ಯವನ್ನು ಕಡಿತಗೊಂಡಂತಾಗಿದೆ. ಹೀಗಾಗಿ ಇನ್ಮುಂದೆ ರಷ್ಯಾಗೆ ಪಾಶ್ಚಾತ್ಯ ದೇಶಗಳಿಂದ ಯಾವುದೇ ಹಣಕಾಸು ನೆರವು ಸಿಗುವುದಿಲ್ಲ ಎಂಬುದು ಖಾತರಿಯಾಗಿದೆ.

ಅಷ್ಟೇ ಅಲ್ಲದೆ, ಪಾಶ್ಚಾತ್ಯ ಮಾರುಕಟ್ಟೆಗಳಲ್ಲಿ ಅಥವಾ ಯುರೋಪಿಯನ್ ಮಾರುಕಟ್ಟೆಗಳಲ್ಲಿ ರಷ್ಯಾ ಮತ್ತು ಬೆಂಬಲಿತ ದೇಶಗಳು ವ್ಯಾಪಾರ ಮಾಡಲು ಸಾಧ್ಯವಿಲ್ಲದಂತಾಗಿದೆ. ಇಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಎನ್ನುವುದಕ್ಕಿಂತ ಅಮೆರಿಕ ಮತ್ತು ರಷ್ಯಾ
ನಡುವಿನ ಯುದ್ಧವೆಂಬಂತೆಯೇ ಚಿತ್ರಣವಾಗುತ್ತಿದೆ. ಅಂದರೆ ಇದು ಮತ್ತೊಂದು ಮಹಾಯುದ್ಧಕ್ಕೆ ಮುನ್ನುಡಿ ಬರೆಯಲಾಗುತ್ತಿದೆಯೇ ಎಂಬ
ಸಂಶಯ ಜಾಗತಿಕ ವೇದಿಕೆಯಲ್ಲಿ ಹುಟ್ಟಿಕೊಳ್ಳುತ್ತಿದೆ. ಒಂದೊಮ್ಮೆ ಈ ಯುದ್ಧ ನಡೆದಲ್ಲಿ ಅದರ ಪರಿಣಾಮವನ್ನು ಜಗತ್ತಿನ ಪ್ರತಿ ರಾಷ್ಟ್ರಗಳೂ ಅನುಭವಿಸುವಂತಾಗುತ್ತದೆ. ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿರುವ ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಈ ಯುದ್ಧದ ಪರಿಣಾಮ ಹೆಚ್ಚಿನ ಪ್ರಮಾಣದಲ್ಲೇ ಆಗಲಿದೆ.

ಹೀಗಾಗಿ ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಸಂಭವಿಸಿರುವ ಬಿಕ್ಕಟ್ಟು ಮಾತುಕತೆ ಮೂಲಕ ಬಗೆಹರಿಯಬೇಕಿದೆ. ವಿಶ್ವದ ದೊಡ್ಡಣ್ಣನ ಸ್ಥಾನದಲ್ಲಿರುವ ಅಮೆರಿಕವು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಜಾಗತಿಕವಾಗಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕಿದೆ.