ರಾಜ್ಯದ ಹಲವು ಇಲಾಖೆಗಳ ನೌಕರರಿಗೆ ಕಳೆದ ಎರಡ್ಮೂರು ತಿಂಗಳಿನಿಂದ ವೇತನವಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಹಣಕಾಸು ಇಲಾಖೆ ವೇತನ ಬಿಡುಗಡೆ ಮಾಡಿದ ನಂತರ ಆಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಅನುಮೋದನೆ ನೀಡುತ್ತಾರೆ. ನಂತರ ನಗರ ಪ್ರದೇಶ ಗಳ ನೌಕರರಿಗೆ ಖಜಾನೆ-೨ ವ್ಯವಸ್ಥೆ ಮೂಲಕ ವೇತನ ಪಾವತಿಯಾಗುತ್ತದೆ. ಆದರೆ, ಗ್ರಾಮೀಣ ನೌಕರರಿಗೆ ವೇತನ ಪಾವತಿ ಹಲವು ಹಂತಗಳನ್ನು ದಾಟುತ್ತದೆ.
ಇಲಾಖೆಯ ಮುಖ್ಯಸ್ಥರ ಅನುಮೋದನೆಯ ನಂತರ ಜಿ ಪಂಚಾಯತಿ, ಅಲ್ಲಿಂದ ತಾಲೂಕು ಪಂಚಾಯಿತಿ ತಲುಪುತ್ತದೆ. ಅಲ್ಲಿ ಮತ್ತೆ ಇಲಾಖಾವಾರು ಅನುಮೋದನೆ ಪಡೆದು ವೇತನ ನೀಡಲಾಗುತ್ತದೆ. ಈ ಖಜಾನೆ-೨ ಜಾರಿಗೆ ಬಂದ ನಂತರ ಅನುದಾನವನ್ನು ಇಲಾಖಾವಾರು ಪರಿಗಣಿಸಲಾಗುತ್ತಿದೆ. ಇಲಾಖೆಗೆ ನಿಗದಿಯಾದ ಅನುದಾನವನ್ನಷ್ಟೆ ಆ ಇಲಾಖೆಯ ನೌಕರರು ಪಡೆಯಬೇಕಿದೆ. ಇಲಾಖೆಯ ಯಾವ ಕಚೇರಿಯ ಸಿಬ್ಬಂದಿ ಮೊದಲು ವೇತನದ ಪಟ್ಟಿ ಸಿದ್ಧಪಡಿಸಿ, ಖಜಾನೆಗೆ ಸಲ್ಲಿಸುತ್ತಾರೋ ಅವರಿಗೆ ವೇತನವಾಗುತ್ತದೆ. ವಿಳಂಬ ಮಾಡಿದರೆ ಆ ತಿಂಗಳ ವೇತನ ಸಿಗುವುದಿಲ್ಲ.
ಅಲ್ಲದೆ, ಖಜಾನೆ-೨ ಬಂದ ನಂತರ ತಂತ್ರಾಂಶ ಆಧಾರಿತ ವೇತನ ವ್ಯವಸ್ಥೆ ಜಾರಿಗೆ ಬಂದಿದೆ. ಪ್ರತಿ ಹಂತದಲ್ಲೂ ವೇತನಕ್ಕೆ ಅನುಮೋದನೆ ನೀಡುವ ವಿಭಾಗಗಳ ಮುಖ್ಯಸ್ಥರ ಫೋಟೊ, ಡಿಜಿಟಲ್ ಸಹಿ ಒಳಗೊಂಡ ವೇತನ ಕೀ ಇರುತ್ತದೆ. ಅವರು ವರ್ಗಾವಣೆಗೊಂಡರೆ ಅವರ ಸ್ಥಾನಕ್ಕೆ ಬರುವವರ ಡಿಜಿಟಲ್ ಸಹಿ, ಪೋಟೊ ಕೇಂದ್ರ ಕಚೇರಿಗೆ ಕಳುಹಿಸಬೇಕು. ಅಲ್ಲಿ ದೃಢೀಕರಣಗೊಂಡ ನಂತರ ವೇತನ ಪಾವತಿಗೆ ಅನುಮೋದನೆ ನೀಡಬಹುದು. ಈ ಪ್ರಕ್ರಿಯೆಗೆ ಕನಿಷ್ಠ ೨೦ರಿಂದ ೨೫ ದಿನಗಳು ಬೇಕಾಗುತ್ತದೆ. ಪ್ರತಿ ಬಾರಿಯೂ ವರ್ಗಾವಣೆಗಳಾದಾಗ ವೇತನ ವಿಳಂಬ ವಾಗುತ್ತದೆ.
ಅಲ್ಲದೆ, ರಾಜ್ಯ ಸರಕಾರ ಏಪ್ರಿಲ್ ೧ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇ.೧೭ರಷ್ಟು ಮಧ್ಯಂತರ ಪರಿಹಾರ ಘೋಷಿಸಿದ ನಂತರ ವೇತನಕ್ಕಾಗಿ ಹೆಚ್ಚುವರಿ ಅನುದಾನ ನೀಡದೇ ಇದ್ದುದರಿಂದಲೂ ವೇತನ ವಿಳಂಬವಾಗಿದೆ. ಆದ್ದರಿಂದ ನೌಕರರ ಸಂಬಳಕ್ಕಾಗಿ ಸಮರ್ಪಕ ಅನುದಾನ ಮೀಸಲಿಡಬೇಕಿದೆ. ಜಿವಾರು ವೇತನ ಬಿಡುಗಡೆಗೆ ಆದ್ಯತೆ ನೀಡಬೇಕಿದೆ. ಅಲ್ಲದೆ, ಖಜಾನೆ-೨ರಲ್ಲಿರುವ ಎಲ್ಲ ನ್ಯೂನತೆಗಳನ್ನೂ ನಿವಾರಿಸಬೇಕಿದೆ.