Sunday, 15th December 2024

ಬೀಸುವ ದೊಣ್ಣೆಯಿಂದ ಪಾರಾದ ಸರಕಾರ

ಚುನಾವಣಾ ಸಮಯದಲ್ಲಿ ಚಿಕ್ಕ ಚಿಕ್ಕ ವಿಷಯಗಳೂ ಬಹುದೊಡ್ಡ ಸಮಸ್ಯೆಗಳನ್ನು ರಾಜಕೀಯ ಪಕ್ಷಗಳಿಗೆ ಹುಟ್ಟು ಹಾಕುತ್ತದೆ. ಅದರಲ್ಲಿಯೂ ‘ಮತಬ್ಯಾಂಕ್’ಗಳ ಕ್ಷೇತ್ರಗಳಲ್ಲಿ ಏನೇ ಸಣ್ಣಪುಟ್ಟ ತೊಂದರೆಯಾದರೂ, ಅದರ ಪರಿಣಾಮ ದೊಡ್ಡ ಮಟ್ಟದಲ್ಲಿಯೇ ಆಗುತ್ತದೆ. ಆದ್ದರಿಂದಲೇ ಅಳೆದು ತೂಗಿ ಎಚ್ಚರಿಕೆಯ ಇಡಬೇಕಾಗಿರುವುದು ಆಡಳಿತದಲ್ಲಿರುವವರ ಆದ್ಯತೆಯಾಗಿರುತ್ತದೆ.

ರಾಜ್ಯ ಸರಕಾರಿ ನೌಕರರ ಮುಷ್ಕರ ಕೇವಲ ಒಂದೇ ದಿನಕ್ಕೆ ಮುಗಿಯಿತು ಎನ್ನುವುದಕ್ಕಿಂತ ಹೆಚ್ಚಾಗಿ, ಈ ವಿಷಯದಲ್ಲಿ ಸರಕಾರ ನಡೆದುಕೊಂಡ ರೀತಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಗೆದುಕೊಂಡ ತೀರ್ಮಾನ ಮುತ್ಸದಿತನದಿಂದ ಕೂಡಿದೆ ಎಂದರೆ ತಪ್ಪಾಗುವುದಿಲ್ಲ. ಹಾಗೇ ನೋಡಿದರೆ, ಬಜೆಟ್‌ನಲ್ಲಿ ಏಳನೇ ವೇತನ ಆಯೋಗದ ಪ್ರಸ್ತಾಪ ಮಾಡಿದ್ದರೆ, ಮುಷ್ಕರ ಈ ಹಂತದವರೆಗೆ ಬರುತ್ತಿರಲಿಲ್ಲ.

ಆದರೆ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಏಳನೇ ವೇತನ ಆಯೋಗ ಪ್ರಸ್ತಾಪಿಸದೇ, ಅದೇ ದಿನ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ, ಮಧ್ಯಂತರ ವರದಿಯನ್ನು ಪಡೆದು ಕ್ರಮವಹಿಸುವುದಾಗಿ ಪ್ರಕಟಿಸಿ ದರು. ಈ ವೇಳೆಗಾಗಲೇ ನೌಕರರ ಸಂಘದವರು ಮುಷ್ಕರಕ್ಕೆ ಸಿದ್ಧತೆ ನಡೆಸಿಕೊಳ್ಳುವುದು ಮಾತ್ರ ವಲ್ಲದೇ, ಏಳನೇ ವೇತನ ಆಯೋಗ ಮಾತ್ರವಲ್ಲದ್ದೇ ಹಳೇ ಪಿಂಚಣಿ ಯೋಜನೆಯನ್ನು ಮರುಜಾರಿ ಗೊಳಿಸಬೇಕು ಎನ್ನುವ ಪಟ್ಟನ್ನು ಹಿಡಿದಿದ್ದರು.

ಆದರೆ ಏಳನೇ ವೇತನ ಆಯೋಗದ ವರದಿ ಜಾರಿಗೊಳಿಸುವುದು ಎಷ್ಟು ಅನಿವಾರ್ಯವೋ, ಒಪಿಎಸ್ ಅನ್ನು ಪುನರ್ ಸ್ಥಾಪಿಸುವುದು ಭವಿಷ್ಯದ ದೃಷ್ಟಿಯಿಂದ ಅಷ್ಟೇ ಸಮಸ್ಯೆ. ಇದೇ ಮಾತನ್ನು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ ಚುನಾವಣಾ ಸಮಯದಲ್ಲಿ ಈ ವಿಷಯವೂ ಪಕ್ಷಕ್ಕೆ ಭಾರಿ ಹೊಡೆತ ಕೊಡುವ ಸಾಧ್ಯತೆಯಿರುವುದರಿಂದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶೇ.೧೭ರಷ್ಟು ವೇತನವನ್ನು ತಾತ್ಕಲಿಕವಾಗಿ ಮಾಡಲು ಒಪ್ಪಿಗೆ ನೀಡುವುದರೊಂದಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಆದೇಶವನ್ನು ಹೊರಡಿಸಿದ್ದಾರೆ. ಈ ಮೂಲಕ ‘ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ’.

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಽಸಿದ ಸಮಿತಿ ರಚನೆಯಾಗಿ, ಅದು ವರದಿ ಕೊಡುವುದಕ್ಕೆ ಕನಿಷ್ಠ ಆರೇಳು ತಿಂಗಳ ಅಗತ್ಯವಿರುವುದರಿಂದ,
ಮುಂದಿನ ಸರಕಾರದ ಮೇಲೆ ಇದನ್ನು ಒಪ್ಪುವ ಅಥವಾ ತಿರಸ್ಕರಿಸುವ ಜವಾಬ್ದಾರಿಯನ್ನು ಬೊಮ್ಮಾಯಿ ಹಾಕಿದ್ದಾರೆ.