Saturday, 12th October 2024

ವಾಸ್ತವದ ಸಿಎಂ ನಡೆ ಶ್ಲಾಘನೀಯ

‘ವಾಸ್ತು’ ಕಾರಣಕ್ಕೆ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನ ಸೌಧದ ಮುಖ್ಯಮಂತ್ರಿ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ,
ಅದರ ಮೂಲಕವೇ ಒಳಗೆ ಪ್ರವೇಶಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಸಂದೇಶವೊಂದನ್ನು ರಾಜ್ಯಕ್ಕೆ ರವಾ ನಿಸಿದ್ದಾರೆ.

ನಂಬಿಕೆ, ಭಾವನೆಗಳ ಪ್ರಶ್ನೆ ಏನೇ ಇದ್ದರೂ, ರಾಜ್ಯ-ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಂಥವರು ತಮ್ಮ ಪ್ರತಿ ನಡೆಯಲ್ಲಿ ಆದರ್ಶ ಮೆರೆಯಬೇಕಾದದ್ದು ಧರ್ಮ. ಈ ಧರ್ಮವನ್ನು ಸಿದ್ದರಾಮಯ್ಯ ಪಾಲಿಸಿದ್ದಾರೆ. ಉತ್ತಮ, ದಕ್ಷ ಆಡಳಿತಗಾರ, ಜನಪರ ಕಾಳಜಿಯ ನಾಯಕನೆನಿಸಿಕೊಂಡವನು ಇಂಥ ಮೂಢ ನಂಬಿಕೆಗಳಿಗೆ ಯಾವತ್ತೂ ಜೋತು ಬೀಳುವುದಿಲ್ಲ. ಆರೋಗ್ಯಕರ ಮನಸ್ಸು, ಸ್ವಚ್ಛ ಹೃದಯ, ಜನಪರ ಕಾಳಜಿಗಳ ವಾಸ್ತವದ ಮುಂದೆ ‘ವಾಸ್ತು’ವಿನಂಥ ಸಂಗತಿಗಳು ಗೌಣವಾಗುತ್ತವೆ. ಹಾಗೆ ನೋಡಿದರೆ ನಮ್ಮ ಹಿರಿಯರು ಕಟ್ಟಿದ, ದೇಶದಲ್ಲೇ ಮಾದರಿಯಾದ, ಶ್ರೇಷ್ಠ ವಾಸ್ತು ಶಿಲ್ಪ-ಶೈಲಿ ಯನ್ನೊಳಗೊಂಡ ಆಡಳಿತಸೌಧ ಯಾವುದೇ ರೀತಿಯಲ್ಲೂ ಅವೈಜ್ಞಾನಿಕವಾಗಿರಲು ಸಾಧ್ಯವೇ ಇಲ್ಲ.

ಹಾಗೊಮ್ಮೆ ಇದ್ದದ್ದೇ ಆದರೆ ವಿಧಾನಸೌಧದದ ನಿರ್ಮಾತೃಗಳಿಗೆ ವಾಸ್ತುವಿನ ಜ್ಞಾನದ ಕೊರತೆ ಇತ್ತೇ ಎಂಬ ಪ್ರಶ್ನೆ ಏಳುತ್ತದೆ. ಅಥವಾ ವಾಸ್ತು ಪ್ರಕಾರ ನೋಡದೇ ಅಲ್ಲಿ ಬಾಗಿಲನ್ನು ಇಡಲಾಗಿತ್ತೇ? ಈ ಹಿಂದೆಲ್ಲ ಆಡಳಿತ ನಡೆಸಿದವರೇನೂ ಅಜ್ಞಾನಿ ಗಳಾಗಿರಲಿಲ್ಲವಲ್ಲಾ? ಯಾವುದೇ ಕಟ್ಟಡವಾಗಲಿ ಉತ್ತಮ ಗಾಳಿ, ಬೆಳಕು ಬರುವಂತಿದ್ದರೆ ಅದು ಸಹಜವಾಗಿಯೇ ‘ಉತ್ತಮ ವಾಸ್ತು’ ಎನಿಸಿಕೊಳ್ಳುತ್ತದೆ ಎಂಬ ಸಿದ್ದರಾಮಯ್ಯ ಅವರ ನಿಲುವು ನೂರಕ್ಕೆ ನೂರು ಸತ್ಯ. ಮೂಢನಂಬಿಕೆಯ ವಿರುದ್ಧದ ಮುಖ್ಯಮಂತ್ರಿಗಳ ಈ ನಡೆಖಂಡಿತವಾಗಿಯೂ ಸ್ವಾಗ ತಾರ್ಹ ಮತ್ತು ಮಾದರಿಯಾದದ್ದು.

ಸ್ವಂತ ಬಲದ ಮೇಲೆ ನಂಬಿಕೆಯಿಲ್ಲದವರು, ವೃಥಾ ಬೇರೊಂದು ಬಗೆಯುವವರು ಇಂಥ ಸಂಗತಿಗಳಿಗೆ ಜೋತು ಬೀಳುತ್ತಾರೆಯೇ ವಿನಾ, ಉತ್ತಮ ಆಡಳಿತಗಾರನೊಬ್ಬ ಇಂಥದಕ್ಕೆಲ್ಲ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುವುದಿಲ್ಲ. ಅಷ್ಟಕ್ಕೂ ಪಾರಂಪರಿಕ ಶ್ರೇಷ್ಠತೆಯ, ನಾಡಿನ ಹೆಮ್ಮೆಯ ಆಡಳಿತಸೌಧವನ್ನು ತಮ್ಮ ಮೂಗಿನ ನೇರಕ್ಕೆ ಬದಲಿಸಿಕೊಳ್ಳುವ ಅಧಿಕಾರ ಯಾರೊಬ್ಬರಿಗೂ ಇಲ್ಲ. ಜನಪ್ರತಿನಿಧಿಗಳಾಗಿ ಆಯ್ಕೆಯಾದವರು, ಜನಸೇವೆಯ ಕೈಕರ್ಯಕ್ಕೆ ಕಟಿಬದ್ಧರಾಗಬೇಕೇ ವಿನಾ, ತಮ್ಮ ನಂಬಿಕೆಗಳ ಹೆಸರಿನಲ್ಲಿ ಪಾರಂಪರಿಕ ಕಟ್ಟಡವನ್ನು ಬದಲಿಸುವುದಾಗಲೀ, ಅದಕ್ಕೆ ಧಕ್ಕೆ ತರುವುದಾಗಲೀ ಮಾಡುವುದು ಸಲ್ಲ. ಬದಲಿಗೆ ಆದರ್ಶಗಳನ್ನು ತಾವೂ ಪಾಲಿಸುತ್ತ, ಜನರಿಗೂ ಅದನ್ನೇ ಅನುಸರಿಸಲು ಹೇಳಿ ಮಾದರಿಯಾಗಬೇಕು. ಈ ಹಿಂದೆ ಇಂಥದ್ದೇ ವಾಸ್ತುವಿನ ಹೆಸರಲ್ಲಿ ಸೌಧದಲ್ಲಿ ಗೋಡೆಗಳನ್ನು ಬದಲಿಸಿ, ಟೀಕೆಗೊಳಾಗಾದ ರಾಜಕಾರಣಿಗಳ ಉದಾರಣೆಗಳೂ ಇವೆ.

ಹೀಗೆ ಮಾಡುತ್ತ ಹೋದಲ್ಲಿ, ಮೂಲ ಸೌಧದ ಆಕರ್ಷಣೆಯೇ ಮರೆಯಾಗುವ ಅಪಾಯಗಳಿವೆ. ನಮ್ಮ ಹೆಮ್ಮೆಯ ವಿಧಾನ ಸೌಧವನ್ನು ಮೂಲಸ್ವರೂಪದಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲ ಜನಪ್ರತಿನಿಧಿಗಳದ್ದೂ ಹೌದು.