Saturday, 14th December 2024

ಕನ್ನಡಿಗರ ನೆರವಿಗೆ ಧಾವಿಸಿ

ಕೇರಳ ಸರಕಾರ ಉದ್ಯೋಗಕ್ಕಾಗಿ ಮಲಯಾಳಿ ಭಾಷೆಯನ್ನು ಅಲ್ಪಸಂಖ್ಯಾತ ಕನ್ನಡಿಗರಿಗೂ ಕಡ್ಡಾಯ ಮಾಡಿದ್ದು, ಇದರಿಂದ ಕನ್ನಡಿ ಗರು ಉದ್ಯೋಗದಿಂದ ವಂಚಿತರಾಗುವ ಆತಂಕ ಎದುರಾಗಿದೆ.

ಇತ್ತೀಚೆಗೆ ತಿರುವನಂತಪುರದಲ್ಲಿ ನಡೆದ ಮಲೆಯಾಳಿ ಮಿಷನ್ ಮಾತೃಭಾಷಾ ದಿನಾಚರಣೆ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ಮಲೆಯಾಳಿ ಭಾಷೆ ಗೊತ್ತಿದ್ದರೆ ಮಾತ್ರ ಕೇರಳದಲ್ಲಿ ಸರಕಾರಿ ಉದ್ಯೋಗ’ ಎಂಬ ಹೇಳಿಕೆ ಕೊಟ್ಟಿದ್ದಾರೆ. ಕೇರಳ ಮುಖ್ಯಮಂತ್ರಿಗಳ ಹೇಳಿಕೆ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಭಾಷಾ ಅಲ್ಪ ಸಂಖ್ಯಾತರ ಹಿತ ರಕ್ಷಣೆ ಕಾಯುವಲ್ಲಿ ತದ್ವಿರುದ್ಧ ಹೇಳಿಕೆಯಾಗಿದೆ.

ಇದರಿಂದ ಕಾಸರಗೋಡು ಹಾಗೂ ಸುತ್ತಮುತ್ತ ಇರುವ ಅಲ್ಪಸಂಖ್ಯಾತ ಕನ್ನಡಿಗರು ಆತಂಕಗೊಂಡಿದ್ದಾರೆ. ಇದುವರೆಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪ ಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಮಲೆಯಾಳ ಭಾಷೆಯಿಂದ ವಿನಾಯತಿ ಇತ್ತು. ಇದೀಗ ಇದ್ದಕ್ಕಿಂದ್ದಂತೆ ಇಂತಹ ಹೇಳಿಕೆ ಕೊಟ್ಟಿರುವುದರಿಂದ ದೊಡ್ಡ ಸಂಖ್ಯೆಯ ಅಲ್ಪಸಂಖ್ಯಾತ ಕನ್ನಡಿಗರು ಉದ್ಯೋಗ ಅಭದ್ರತೆ ಎದುರಿಸುವಂತಾಗಿದೆ. ಒಂದು ವೇಳೆ ಕಾಸರಗೋಡಿನ ಕನ್ನಡಗಿರಿಗೂ ಮಲೆಯಾಳಿ ಭಾಷೆಯನ್ನು ಉದ್ಯೋಗದ ದೃಷ್ಟಿಯಿಂದ ಕಡ್ಡಾಯ ಮಾಡಿದರೆ ಅದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ನೀಡಿದ ರಕ್ಷಣೆಯ ಸ್ಪಷ್ಟ ಉಲ್ಲಂಘನೆ ಆಗುತ್ತದೆ.

ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕಾನೂನು ಹೋರಾಟ ಮಾಡಿ ಅಲ್ಲಿನ ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸಕ್ಕೆ ಮುಂದಾಗಬೇಕಿದೆ.
ಈ ಹಿಂದಿನಂತೆಯೇ ಕಾಸರಗೋಡಿನ ಕನ್ನಡಿಗರಿಗೆ ಮಲೆಯಾಳ ಭಾಷೆಯಿಂದ ವಿನಾಯತಿ ಮುಂದುವರಿಯುವಂತೆ ಮಾಡಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರು ಕಾಸರಗೋಡಿ ನಲ್ಲಿರುವ ಅಲ್ಪಸಂಖ್ಯಾತ ಕನ್ನಡಿಗರ ನೆರವಿಗೆ ನಿಲ್ಲಬೇಕಿದೆ.

ಇಲ್ಲವಾದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಕನ್ನಡಿಗರಿಗೆ ಕೇರಳದಲ್ಲಿ ಉದ್ಯೋಗ ಪಡೆಯುವುದು ಇದರಿಂದ ಕಷ್ಟಸಾಧ್ಯವಾಗುತ್ತದೆ. ಅಷ್ಟೇ
ಅಲ್ಲದೇ, ಮುಂದೊಂದು ದಿನ ಕಾಸರಗೋಡಿನಲ್ಲಿ ಕನ್ನಡದ ಕುರುಹೂ ಇಲ್ಲದಂತಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರಕಾರವೂ ಮಧ್ಯೆ ಪ್ರವೇಶಿಸಿ ಕೇರಳ ಮುಖ್ಯಮಂತ್ರಿಗಳ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಡ ಹೇರಬೇಕಿದೆ. ಆ ಮೂಲಕ ನಾಡು-ನುಡಿಗಾಗಿ ಮಿಡಿಯುವ ಸರಕಾರ ಎಂಬುದನ್ನು ಸಾಬೀತುಪಡಿಸಬೇಕಿದೆ.