Monday, 14th October 2024

ಎಸ್‌ಸಿ ಎಸ್‌ಟಿ ಮೀಸಲು ಹೆಚ್ಚಳ ಸ್ವಾಗತಾರ್ಹ ನಿರ್ಧಾರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ರಾಜ್ಯ ಸರಕಾರದ ನಿರ್ಧಾರ ಸ್ವಾಗತಾರ್ಹ.

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ಬೊಮ್ಮಾಯಿ ನೇತೃತ್ವದ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಸಂಬಂಧ ಶನಿವಾರವೇ ಸಚಿವ ಸಂಪುಟದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿರುವುದು ಬಹುಕಾಲದಿಂದ ಇದನ್ನು ನಿರೀಕ್ಷಿಸುತ್ತಿರುವ ಸಮುದಾಯ ಗಳಿಗೆ ನೆಮ್ಮದಿ ತಂದಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಉನ್ನತಿ ಗಾಗಿ ಮೀಸಲಾತಿಯ ನೀತಿ ತಾತ್ವಿಕವಾಗಿ ಸರಿಯಾಗಿಯೇ ಇದೆ.

ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಮೀಸಲಾತಿ ನೀತಿ ವಾಸ್ತವಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಬಳಕೆಯಾದುದಕ್ಕಿಂತಲೂ ಕಾಲಕಾಲಕ್ಕೆ ರಾಜಕೀಯ ಅಸವಾಗಿಯೇ ಬಳಕೆಯಾಗಿರುವುದು ಹೆಚ್ಚು. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು (ಈಗಿರುವುದು ಶೇ ೧೫) ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು (ಈಗಿನ ಪ್ರಮಾಣ ಶೇ ೩) ಶೇ ೭ಕ್ಕೆ ಹೆಚ್ಚಿಸಲಾಗುತ್ತಿದೆ.

ಇದೇ ವೇಳೆ ವೀರಶೈವ ಪಂಚಮಸಾಲಿ ಪಂಗಡಗಳಿಗೂ ಮೀಸಲಾತಿ ನೀಡಬೇಕೆಂಬ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. ಇಂತಹ ಬೇಡಿಕೆಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಅಲ್ಲದೆ ಒಟ್ಟಾರೆ ಮೀಸಲಾತಿಯ ಪ್ರಮಾಣ ಶೇ ೫೦ನ್ನು ಮೀರುವಂತಿಲ್ಲ ಎಂಬುದು ಸುಪ್ರೀಂ ಕೋರ್ಟಿನ ಆದೇಶ. ಈ ಮಿತಿಯನ್ನು ದಾಟುವಂತಿಲ್ಲ. ಆದರೆ ಮಿತಿಯನ್ನು ದಾಟದೆ ಮೀಸಲಾತಿ ಪ್ರಮಾಣ ಹೆಚ್ಚಿಸಲೂ ಸಾಧ್ಯವಿಲ್ಲ. ಇದೊಂದು ಹಗ್ಗದ ಮೇಲಿನ ನಡಿಗೆಯ ಸನ್ನಿವೇಶ. ಸಂವಿಧಾನದ ಪರಿಚ್ಛೇದ ೯ರ ಅಡಿಯಲ್ಲಿ ಈಗ ಹೆಚ್ಚಿಸಲು ನಿರ್ಧರಿಸಿರುವ ಮೀಸಲಾತಿಯನ್ನು ತಂದರೆ, ಅದು ನ್ಯಾಯಾಂಗದ ಪರಾಮರ್ಶೆಗೆ ಒಳಪಡುವುದಿಲ್ಲ ಎಂಬ ಕಾನೂನು ತಜ್ಞರ ಸಲಹೆಯಂತೆ ಮುಂದಡಿಯಿಡಲು ಬೊಮ್ಮಾಯಿ ಸರಕಾರ ಮುಂದಾಗಿದೆ.

ಅದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿರುವುದು ಈ ನಿಟ್ಟಿನಲ್ಲಿ ಮಹತ್ವದ ನಡೆಯೇ ಆಗಿದೆ. ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳದಿಂದ ಇತರ ಸಮುದಾಯಗಳ ಮೀಸಲಾತಿ ಕಡಿತವಾಗುವುದಿಲ್ಲ ಎಂಬ ಬೊಮ್ಮಾಯಿ ಅವರ ಹೇಳಿಕೆ ಗಮನಾರ್ಹ ವಾಗಿದೆ.