Thursday, 12th December 2024

ಅಧಿವೇಶನ ಅಲ್ಲೇ ನಡೆಯಲಿ

ಯಾವ ದೃಷ್ಟಿಯಲ್ಲಿ ನೋಡಿದರೂ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಚಳಿಗಾಲದ ವಿಧಾನಸಭಾ ಅಧಿವೇಶನವನ್ನು ಮುಂದೂಡುವುದು ಅರ್ಥ ಹೀನ. ಕರೋನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಆಡಳಿತ ಯಂತ್ರ ಸೊರಗಿರುವುದು ಸಹಜ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಚರ್ಚೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕೋಟ್ಯಂತರ ರು. ವೆಚ್ಚ ಮಾಡಿ, ರಾಜ್ಯದ ಎರಡನೇ ರಾಜಧಾನಿಯ ಸ್ಥಾನಮಾನದಲ್ಲಿ ಬೆಳಗಾವಿಯನ್ನು ಬಿಂಬಿಸಬೇಕೆಂಬ ಉದ್ದೇಶಪೂರ್ವಕ ನಡೆಯಾಗಿ ಸುವರ್ಣಸೌಧವನ್ನು ಅಲ್ಲಿ ನಿರ್ಮಿಸಲಾಗಿದೆ. ಇಂಥ ಭವ್ಯ ಆಡಳಿತ ದೇಗುಲ ಧೂಳು ಹಿಡಿದು ಭೂತ ಬಂಗಲೆಯಾಗುತ್ತಿದೆ. ಆಡಳಿತ ವಿಕೇಂದ್ರೀಕರಣಕ್ಕೆ ಅನುಕೂಲ ವಾಗುವಂತೆ ಸರಕಾರ ಕೈಗೊಂಡ ನಿರ್ಧಾರ ಮಾತ್ರವಲ್ಲ, ಮರಾಠಿಗರ ಸೊಕ್ಕಡಗಿಸಲು ಇಟ್ಟ ದಿಟ್ಟ ಹೆಜ್ಜೆ ಇದು. ದೀಗ ಮತ್ತೆ ಅಲ್ಲಲ್ಲಿ ಎಂಇಎಸ್ ತಲೆ ಎತ್ತುತ್ತಿರುವ ಸನ್ನಿವೇಶದಲ್ಲಿ ಸೋಂಕಿನ ನೆಪವಿಟ್ಟುಕೊಂಡು ಜನ ಪ್ರತಿನಿಧಿಗಳು, ಸರಕಾರಿ ನೌಕರರು ಅಧಿವೇಶನವನ್ನೇ ರದ್ದುಗೊಳಿಸುವಂತೆ ಹೇಳುತ್ತಿರುವುದು ಪಾಯಕಾರಿ.

ಆಡಳಿತಾತ್ಮಕ ದೃಷ್ಟಿಯಿಂದಲೂ ಬೆಳಗಾವಿಯ ಅಧಿವೇಶನ ಔಚಿತ್ಯಪೂರ್ಣ. ಉತ್ತರಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಗೆ ಇದು ಸೂಕ್ತ ವೇದಿಕೆ. ನಿರ್ಲಕ್ಷಿತ ಭಾಗದ ಜನಕ್ಕೆ ವಿಶ್ವಾಸ ತುಂಬುವ ನಿಟ್ಟಿನಲ್ಲೂ ಬೆಳಗಾವಿ ಅಧಿವೇಶನ ಪ್ರಾಮುಖ್ಯ. ಜತೆಗೆ ಈ ಬಾರಿ ಬರ- ಅಕಾಲಿಕ ನೆರೆಯಿಂದ ಬೆಳೆ ಹಾನಿಯಾಗಿ ಉತ್ತರ ಕರ್ನಾಟಕ ಬಹಳಷ್ಟು ನೊಂದಿದೆ. ರೈತರು ನೊಂದಿದ್ದಾರೆ. ಲಾಕ್‌ಡೌನ್ ಕರಿನೆರಳು ಅಲ್ಲಿನ ಜನಜೀವನವನ್ನು ಕಂಗಾ ಲಾಗಿಸಿದೆ. ಹೀಗಾಗಿ ಭರವಸೆ ತುಂಬಲಿ ಕ್ಕಾಗಿಯೂ ಸರಕಾರ ಕೆಲದಿನಗಳ ಮಟ್ಟಿಗಾದರೂ ಬೆಳಗಾವಿಗೆ ಹೋಗಿ ನಿಂತರೆ ಭರವಸೆ ಮೂಡುತ್ತದೆ. ಕರೋನಾ, ಒಮೈಕ್ರಾನ್ ಹೆಸರಿನಲ್ಲಿ ಬೆಂಗಳೂರಿನಂಥ ನಗರಗಳ ಯಾವ ವಹಿವಾಟೂ ನಿಂತಿಲ್ಲ.

ಶಾಲಾ ಕಾಲೇಜುಗಳು, ಮಾಲು, ಥಿಯೇಟರ್‌ಗಳು, ಚುನಾವಣಾ ಪ್ರಚಾರ ರ‍್ಯಾಲಿಗಳು ರಾಜ್ಯದ್ಯಂತ ಎಂದಿನಂತೆಯೇ ಪುನಾರಂಭಗೊಂಡಿರುವಾಗ ಅಧಿವೇಶನ ಮಾತ್ರ ರದ್ದುಗೊಳ್ಳುವುದು ಯಾವ ನ್ಯಾಯ? ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ, ಆಡಳಿತದ ಸಮಾನತೆಗಾಗಿ, ಅಭಿವೃದ್ಧಿಯ ನೈಜ ಅನುಷ್ಠಾನ ಕ್ಕಾಗಿ ಹದಿನೈದು ದಿನಗಳ ಬೆಳಗಾವಿ ಅಧಿವೇಶನ ನಡೆಯಲೇಬೇಕು. ಅದಕ್ಕೆ ಬೇಕಾದ ಅಗತ್ಯ ಜಾಗೃತ ಕ್ರಮಗಳನ್ನು ಕೈಗೊಂಡು ಆತಂಕ ಆಡಳಿತ ಯಂತ್ರ ವನ್ನು ಸಜ್ಜುಗೊಳಿಸುವ ಹೊಣೆ ಸರಕಾರದ್ದು.