ಸಂಸತ್ ಅಧಿವೇಶನ ಶುರುವಾದಾಗಿನಿಂದ ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತೀವ್ರ ಗದ್ದಲ ಸೃಷ್ಟಿಸಿದ್ದು,
ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಈವರೆಗೂ ಪ್ರತಿಪಕ್ಷಗಳ 19 ಮಂದಿ ಸಂಸದ ರನ್ನು ಅಮಾನತುಗೊಳಿಸಲಾಗಿದೆ.
ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿ ರುವುದನ್ನು ಮತ್ತು ಬೆಲೆ ಏರಿಕೆ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಕರಪತ್ರಗಳನ್ನು ಹಂಚಿಪ್ರತಿಭಟನೆ ಕೈಗೊಂಡಿದ್ದಾರೆ. ಪ್ರತಿಪಕ್ಷಗಳಿಗೆ ಪ್ರತಿಭನೆಯನ್ನು ಮಾಡುವ ಹಕ್ಕಿದೆ. ಆದರೆ ಸ್ಪೀಕರ್ ಅವರ ಪೀಠದ ಎದುರು ಕರಪತ್ರಗಳನ್ನು ಪ್ರದರ್ಶಿಸುವುದು ಪ್ರತಿಭಟಿಸುವ ವಿಧಾನವಲ್ಲ. ಕಾಂಗ್ರೆಸ್ ಸಂಸದರ ಈ ನಡವಳಿಕೆಯು ಅವರಿಗೆ ಸ್ಪೀಕರ್ ಪೀಠದ ಮೇಲೆ ಗೌರವ ಇಲ್ಲವೆಂಬುದನ್ನು ತೋರಿಸಿಕೊಟ್ಟಿದೆ.
ಜನರ ಸಮಸ್ಯೆಗಳನ್ನು ಕಲಾಪದಲ್ಲಿ ಜನಪ್ರತಿನಿಧಿಗಳು ಚರ್ಚಿಸಿ, ಪರಿಹಾರ ಸೂಚಿಸಲಿ ಎಂಬ ಕಾರಣಕ್ಕೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಕಲಾಪ ನಡೆಸಲಾಗುತ್ತದೆ. ಆದರೆ ಪ್ರತಿ ಬಾರಿಯೂ ಕಲಾಪವನ್ನು ಸುಗಮವಾಗಿ ನಡೆಸದೇ, ಈ ರೀತಿ ಗದ್ದಲದಲ್ಲೇ ಕಾಲ ಕಳೆಯುವಂತೆ ಮಾಡುವುದರಿಂದ ಯಾರಿಗೆ ಪ್ರಯೋಜನ ಎಂಬುದನ್ನು ಸಂಸದರು ಪ್ರಶ್ನಿಸಿಕೊಳ್ಳ ಬೇಕಿದೆ.
ಸದನದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಮೊಟ್ಟಮೊದಲಿಗೆ ಸಂಸದರು ಸ್ಪೀಕರ್ ಅವರ ಪೀಠಕ್ಕೆ ಗೌರವ ನೀಡಬೇಕು, ಕಲಾಪದ ನಿಯಮಗಳನ್ನು ಪಾಲಿಸಬೇಕು. ಆದರೆ ಇವ್ಯಾವವೂ ಈಗಿನ ಸಂಸದರಿಂದ ಆಗುತ್ತಿಲ್ಲ. ಪ್ರತಿಪಕ್ಷಗಳ ಬೇಡಿಕೆಯ ಪ್ರಕಾರ ಬೆಲೆ ಏರಿಕೆ ಬಗ್ಗೆ ಸರಕಾರ ಉತ್ತರಿಸಬೇಕಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ನಿಂದಾಗಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಂಡ ಕೂಡಲೇ ಬೆಲೆ ಏರಿಕೆ ಬಗ್ಗೆ ಚರ್ಚಿಸಲು ಸರಕಾರ ಸಿದ್ಧವಿದೆ ಎಂದು ತಿಳಿಸಿದೆ. ಆದರೂ ಪ್ರತಿಪಕ್ಷಗಳ ಸದಸ್ಯರು ಸರಕಾರದ ಉತ್ತರಕ್ಕೆ ಸಮಾಧಾನಗೊಳ್ಳದೆ ವಿನಾಕಾರಣ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ.
ಪ್ರತಿ ಸಂಸದರಿಗೂ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ, ಅಭಿವೃದ್ಧಿ ಕುರಿತು ಮಾತನಾಡುವ ಸಂವಿಧಾನಾತ್ಮಕ ಅವಕಾಶವನ್ನು ಹಾಳು ಮಾಡುವುದು ಸಂವಿಧಾನಕ್ಕೂ ಅಗೌರವ ತೋರಿದಂತೆ ಎಂಬುದನ್ನು ಪ್ರತಿಪಕ್ಷಗಳು ಸದಸ್ಯರು ಅರ್ಥ ಮಾಡಿಕೊಳ್ಳ ಬೇಕು. ಬಾಕಿ ಉಳಿದ ಮುಂದಿನ ದಿನಗಳಲ್ಲಾದರೂ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು.