ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಕಾಂಗ್ರೆಸ್‌ನ ಗ್ಯಾರಂಟಿ ಗಳಲ್ಲೊಂದಾದ ‘ಶಕ್ತಿ ಯೋಜನೆ’ ಈಗಾಗಲೇ ಜಾರಿಗೊಂಡು ಅಭೂತಪೂರ್ವ ಸ್ಪಂದನೆ ದೊರೆತಿದೆ.
ಆರಂಭಿಕ ಗೊಂದಲ, ಪ್ರಯಾಣಿಕರಲ್ಲಿನ ಉತ್ಸಾಹಗಳನ್ನು ಹೊರತುಪಡಿಸಿದಂತೆ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಇದೊಂದು ಉತ್ತಮ ಹೆಜ್ಜೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಧಿಕಾರಕ್ಕೆ ಬಂದ ಇಪ್ಪತ್ತು ದಿನಗಳೊಳಗೆ ಕೊಟ್ಟ ಮಾತಿನಂತೆ ಯೋಜನೆ ಯನ್ನು ಜಾರಿಗೊಳಿಸಿರುವ ಸಿದ್ದರಾಮಯ್ಯ ಸರಕಾರವನ್ನು ಅಭಿನಂದಿಸಲೇಬೇಕು. ಈ ಹಂತದಲ್ಲಿ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿರಿಯ ನಾಗರಿಕರಿಗೂ ರಾಜ್ಯಾದ್ಯಂತ ಈ ಯೋಜನೆಯನ್ನು ವಿಸ್ತರಿಸುವುದು ಔಚಿತ್ಯಪೂರ್ಣ.
ಇತ್ತೀಚಿನ ಅಂಕಿ ಅಂಶದ ಪ್ರಕಾರ ಸುಮಾರು ೧೦ ಭಾರತೀಯರಲ್ಲಿ ಒಬ್ಬರು ೬೦ ವರ್ಷ ಕ್ಕಿಂತ ಮೇಲ್ಪಟ್ಟವರು. ಅಂದರೆ ಒಟ್ಟು ಜನಸಂಖ್ಯೆಯ ಶೇ.೧೦ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರು. ಈ ಪೈಕಿ ಬಹುಪಾಲು ವಯೋವೃದ್ಧರು ಸರಕಾರದ ಅತ್ಯಲ್ಪ ಬೆಂಬಲದಿಂದ ಬದುಕುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ವೃದ್ಧರ ಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮ ವಾಗೇನೂ ಇಲ್ಲ.
ದಿನದಿಂದ ದಿನಕ್ಕೆ ಕುಟುಂಬದ ಗಾತ್ರ ಕಡಿಮೆಯಾಗುತ್ತಿದ್ದು, ಕೆಲಸಕ್ಕಾಗಿ ಯುವಕರ ವಲಸೆ ಹೆಚ್ಚಿದೆ. ಹೀಗಾಗಿ ಹಳ್ಳಿಗಳಲ್ಲಿ ವೃದ್ಧರು ಮಾತ್ರ ಉಳಿದಿದ್ದು, ದುಡಿಯವ ಶಕ್ತಿಯನ್ನೂ ಕಳಕೊಂಡಿರುವ ಇಂಥವರು ಜೀವನ ನಿರ್ವಹಣೆಗೆ ಕಷ್ಟ ಪಡುವ ಸ್ಥಿತಿ ಇದೆ. ನಗರ ಪ್ರದೇಶಗಳಲ್ಲೂ ಅನೇಕ ವಯಸ್ಸಾದ ಜನರು ಏಕಾಂಗಿಯಾಗಿ ವಾಸಿಸುತ್ತಿzರೆ. ಅನಾರೋಗ್ಯ ಇತ್ಯಾದಿ ಕಾರಣಗಳಿಗೆ ಮೇಲಿಂದ ಮೇಲೆ ದೂರದೂರಿಗೆ ಪ್ರಯಾಣಿಸಬೇಕಾದ ಸ್ಥಿತಿ ಬಂದಾಗ ಪ್ರಯಾಣದ ವೆಚ್ಚವೂ ಅವರಿಗೆ ಹೊರೆಯಾಗುತ್ತಿದೆ. ಸರಕಾರದಿಂದ ದೊರೆಯುತ್ತಿರುವ ಪಿಂಚಣಿ ಸಹ ಅತ್ಯಲ್ಪ ಮೊತ್ತದ್ದಾಗಿದ್ದು, ಸೂಕ್ತ ಆದಾಯದ ಮೂಲವಿಲ್ಲದ ಮಂದಿಗೆ ಪ್ರಯಾಣ ವೆಚ್ಚ ದುಬಾರಿ ಆಗುತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಉಚಿತ ಪ್ರಯಾಣದ ಸೌಕರ್ಯವನ್ನು ಹಿರಿಯ ನಾಗರಿಕರಿಗೂ ವಿಸ್ತರಿಸುವುದು ವಿಹಿತ. ಈಗಾಗಲೇ ಉತ್ತರ
ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಸೌಕರ್ಯ ಜಾರಿಯಲ್ಲಿದೆ. ಇಂಗ್ಲೆಂಡ್‌ನಂಥ ದೇಶಗಳಲ್ಲಿ ರಾಷ್ಟ್ರೀಯ ರಿಯಾಯಿತಿ ಪ್ರಯಾಣ ಯೋಜನೆಯಡಿ ಹಿರಿಯರಿಗೆ ಸಾರಿಗೆ ಸೌಲಭ್ಯ ಜಾರಿಯಲ್ಲಿದೆ. ಕರ್ನಾಟಕದಲ್ಲೂ ೬೦ ವರ್ಷ ಮೇಲ್ಪಟ್ಟವರಿಗೆ ಶಕ್ತಿ ಯೋಜನೆ ವಿಸ್ತರಿಸಿ, ಬರುವ ಬಜೆಟ್‌ನಲ್ಲಿ ಘೋಷಿಸುವ ಮೂಲಕ ಹಿರಿಯರಿಗೆ ಶಕ್ತಿ ತುಂಬುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು.