Sunday, 15th December 2024

ಶಿವಮೊಗ್ಗ ಗಲಭೆ: ಪೊಲೀಸರಿಗೆ ಮುಕ್ತ ಸ್ವಾತಂತ್ರ‍್ಯ ನೀಡಬೇಕು

ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದು ಎರಡು ದಿನಗಳು ಕಳೆದರೂ ಈಗಲೂ ಅಲ್ಲಿ ಭಯದ ವಾತಾವರಣ ಮುಂದುವರಿದಿದೆ. ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆದಿತ್ತು.

ಮೆರವಣಿಗೆಯಲ್ಲಿದ್ದ ಕೆಲ ಕಿಡಿಗೇಡಿಗಳು, ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಕೊಂಡು, ಕೇವಲ ಹಿಂದೂಗಳ ಮನೆಗಳನ್ನೇ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಕಿಟಕಿ, ಬಾಗಿಲುಗಳು ಕಲ್ಲಿನಿಂದ, ಮಚ್ಚಿನಿಂದ ಜಖಂಗೊಳಿಸಿದ್ದರೆ, ವಾಹನಗಳ ಮೇಲೆ ಕಲ್ಲು ಎತ್ತಿ ಹಾಕಿ ಕ್ರೌರ್ಯ ಮೆರೆದಿದ್ದಾರೆ. ಅಲ್ಲದೇ, ಹಿಂದೂಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ಶಿವಮೊಗ್ಗದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಮಲೆನಾಡು ಜಿಲ್ಲೆ ಯಾದ ಶಿವಮೊಗ್ಗದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಕೋಮು ಸಂಘರ್ಷ ನಡೆಯುತ್ತದೆ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಈ ಸಲ ಕೋಮು ಸಾಮರಸ್ಯ ಕದಡುವ, ಅಶಾಂತಿ ಸೃಷ್ಟಿಸುವ ಉದ್ದೇಶ ಈ ಮೆರವಣಿಗೆಯ ಮುನ್ನವೇ ಕಾರ್ಯಪ್ರವೃತ್ತವಾಗಿರುವುದು ಸ್ಪಷ್ಟ.

ಗಲಭೆ ವೇಳೆ ತಲ್ವಾರ್, ಮಚ್ಚುಗಳು ಝಳಪಿಸಲಾಗಿದೆ. ಇವು ಏಕಾಏಕಿ ಮೆರವಣಿಗೆಯ ನಡುವೆ ಸಿದ್ಧತೆ ಯಿಲ್ಲದೇ ಬರಲು ಸಾಧ್ಯವೇ ಇಲ್ಲ. ಇದರ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ಕೈವಾಡ ಇರುವುದು ಸತ್ಯ. ಈ ಹಿಂದೆ ಹರ್ಷ ಎಂಬ ಹಿಂದೂ ಸಂಘಟನೆಯ ಯುವಕನನ್ನು ಅಮಾನುಷವಾಗಿ ಇಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈಗ ದುಷ್ಕರ್ಮಿಗಳು ಎಸ್‌ಪಿ ಮೇಲೆಯೇ ಕಲ್ಲು ತೂರಿzರೆ. ಇನ್ನು ಜನ ಸಾಮಾನ್ಯರ ಕತೆ ಏನು? ನಿರ್ದಿಷ್ಟ ಸಮುದಾಯದ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ರಾಜ್ಯ ಸರಕಾರ ತನ್ನ ರಾಜಕೀಯ ಹಿತಾಸಕ್ತಿ, ವೋಟ್ ಬ್ಯಾಂಕ್ ರಾಜಕೀಯ ಪಕ್ಕಕ್ಕಿಟ್ಟು ಗಲಭೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.

ಇಲ್ಲದಿದ್ದರೆ ಇದು ಬೇರೆ ಪ್ರದೇಶಗಳಿಗೂ ವ್ಯಾಪಿಸಬಹುದು. ಗಲಭೆಕೋರರನ್ನು ಮಟ್ಟ ಹಾಕಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು. ಈ ಗಲಭೆಯ ಹಿಂದಿನ ಶಕ್ತಿ ಯಾವುದು, ಇದು ಪೂರ್ವ ಯೋಜಿತವೇ? ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು.