ರಾಜಕೀಯವೆಂದರೆ ಹೊಲಸು ಮಾತುಗಳದ್ದೇ ದರ್ಬಾರು ಎನ್ನುವಂತಾಗಿರುವುದು ವಿಷಾದನೀಯ. ರಾಜಕೀಯ ನಾಯಕರ
ಮಾತುಗಳು ಆಗಾಗ್ಗೆ ಸಭ್ಯತೆಯ ಎಲ್ಲೆಯನ್ನು ಮೀರುವುದು ಒಪ್ಪತಕ್ಕ ವಿಷಯವಲ್ಲ.
ಇದೀಗ ಹೊಸದಾಗಿ ವಿವಾದ ಸೃಷ್ಟಿಸಿರುವುದು ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತಾಗಿ ಆಡಿದ ‘ನಾಯಿಮರಿ’ ಎಂಬ ಹೇಳಿಕೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾಯಕರ ಸಡಿಲ ನಾಲಿಗೆ ಗಳು ಹೇಗೆ ಬೇಕಾದರೂ ಹೊರಳುತ್ತವೆ. ಎದುರಾಳಿಗಳನ್ನು ಅಥವಾ ವಿರೋಧಿ ನಾಯಕ ರನ್ನು ಟೀಕಿಸಲು ಬಳಸುವ ಪದಪುಂಜಗಳು ಸಭ್ಯತೆಯ ಗೆರೆ ದಾಟುವುದು ಖಂಡನೀಯ.
ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಬೊಮ್ಮಾಯಿ ಅವರು ನಾಯಿಮರಿಯಂತೆ ವರ್ತಿಸುತ್ತಾರೆ ಎಂದು ಸಿದ್ದರಾಮಯ್ಯ ಬಣ್ಣಿಸಿರುವುದು ವ್ಯಾಪಕ ಆಕ್ರೋಶ ಹುಟ್ಟು ಹಾಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಆಡಳಿತ ಪಕ್ಷದ ನಾಯಕ ರೆಲ್ಲರೂ ಸಿದ್ದರಾಮಯ್ಯ ಅವರ ಕೀಳು ಅಭಿರುಚಿಯ ಹೇಳಿಕೆ ವಿರುದ್ಧ ಮುಗಿಬಿದ್ದಿದ್ದಾರೆ. ನಾಯಿ ನಿಯತ್ತಿನ, ನಿಷ್ಠಾವಂತ ಪ್ರಾಣಿ; ಅದರಂತೆ ಇರುವುದೆಂದರೆ ಹೆಮ್ಮೆಯ ಸಂಗತಿ ಎಂದು ಬೊಮ್ಮಾಯಿ ಅವರು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಇತರ ಕೆಲವು ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದು, ಅವರು ಕಾಂಗ್ರೆಸ್ ಅಧಿನಾಯಕಿಯ ಎದುರು ಬೆಕ್ಕು, ಜಿರಳೆ, ಹಲ್ಲಿ ಆಗಿರುತ್ತಾರೆ ಎಂದೆಲ್ಲ ಟೀಕಿಸಿದ್ದಾರೆ. ನಿಜಕ್ಕೂ ರಾಜಕೀಯ ನಾಯಕರಿಗೆ ಮಿದುಳು ಮತ್ತು ನಾಲಿಗೆಯ ಮಧ್ಯೆ ಸಂಪರ್ಕ ತಪ್ಪಿ ಹೋದಾಗ ಇಂತಹ ಮಾತುಗಳೆಲ್ಲ ಬರುತ್ತವೆ. ಪ್ರಾಣಿಗಳಾದರೂ ಮನುಷ್ಯ ರಂತೆ ವಿನಾಕಾರಣ ಅನ್ಯಜೀವಿಗಳ ಮೇಲೆ ದಾಳಿ ಮಾಡುವುದಿಲ್ಲ; ವಂಚನೆ, ದ್ರೋಹ ಎಸಗುವುದಿಲ್ಲ. ನಿಸರ್ಗ ಸಹಜವಾದ ಅವುಗಳ ಆಹಾರ-ವಿಹಾರ, ಸುರಕ್ಷತೆಗೆ ಅಪಾಯ ಬಂದಾಗಲಷ್ಟೇ ಅವುಗಳು ಆಕ್ರಮಣಕಾರಿಯಾಗುತ್ತವೆ ಅನ್ನುವುದು ಬಿಟ್ಟರೆ ಸುಖಾಸುಮ್ಮನೆ ಯಾರಿಗೂ ಹಾನಿಯೆ ಸಗುವುದಿಲ್ಲ.
ಅವುಗಳ ಬದುಕಿಗೂ ಒಂದು ಘನತೆಯಿದೆ, ಗೌರವವಿದೆ. ಜನಸಾಮಾನ್ಯರ ದೃಷ್ಟಿಯಲ್ಲಿ ಇಂತಹ ಮಾತುಗಳು ಖಂಡಿತಕ್ಕೂ ಒಪ್ಪುವಂಥದ್ದಲ್ಲ. ಸಿದ್ದರಾಮಯ್ಯ ಆದಿಯಾಗಿ ಎಲ್ಲ ಮುಖಂಡರೂ ಸಭ್ಯತೆಯಿಂದ ಮಾತನಾಡುವುದನ್ನು ರೂಢಿಸಿಕೊಂಡರೆ ಸ್ವಲ್ಪವಾದರೂ ಗೌರವ ಬಂದೀತು.
Read E-Paper click here