Thursday, 12th December 2024

ಜಾಲತಾಣಗಳ ಮೂಲಕ ಅಪಪ್ರಚಾರ: ಕ್ರಮ ಅಗತ್ಯ

ಇತ್ತೀಚೆಗೆ ಎಲ್ಲ ರಾಜಕಾರಣಿಗಳೂ ತಮ್ಮದೇಯಾದ ಒಂದು ಮಾಧ್ಯಮ ತಂಡವನ್ನು ಕಟ್ಟಿಕೊಂಡು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸಭೆ-ಸಮಾರಂಭಗಳ ಸುದ್ದಿಯ ತುಣುಕುಗಳನ್ನು ಆ ತಂಡದ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಸಿ ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.

ಯುವ ಮತದಾರರ ಓಲೈಕೆಗೆ ರಾಜಕಾರಣಿಗಳ ಈ ಕಸರತ್ತು ಒಳ್ಳೆಯದೇ. ಆದರೆ ಇದು ಇಷ್ಟಕ್ಕೆ ಸೀಮಿತವಾಗುತ್ತಿಲ್ಲ. ಇತ್ತೀಚೆಗೆ ಈ ತಂಡಗಳು ತಮ್ಮ  ಪ್ರತಿಸ್ಪರ್ಧಿ ರಾಜಕೀಯ ಮುಖಂಡರ ವಿರುದ್ಧ ಅಪಪ್ರಚಾರ ನಡೆಸುವ ಯತ್ನವೂ ಜಾಲತಾಣಗಳ ಮೂಲಕ ನಡೆಯುತ್ತಿದೆ. ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವ ಮೂಲಕ ತಮ್ಮ ಪ್ರತಿಸ್ಪರ್ಧಿ ರಾಜಕಾರಣಿಗಳ ತೇಜೋವಧೆಗೆ ಮುಂದಾಗುತ್ತಿದ್ದಾರೆ.

ಮೀಮ್ಸ್, ಟ್ರೋಲ್ ಪೇಜ್‌ಗಳ ಮೂಲಕ ರಾಜಕಾರಣಿಗಳನ್ನು ಟೀಕಿಸುವ ಕೆಲಸ ನಡೆಯುತ್ತಿದೆ. ರಾಜಕೀಯ ನಾಯಕರ ವಿರುದ್ಧ ಮಾಡಲಾದ ಪೋಸ್ಟ್ ಗಳು, ವಾಟ್ಸ್‌ಆಪ್, ಫೇಸ್‌ಬುಕ್ ಸೇರಿದಂತೆ ಜಾಲತಾಣಗಳಲ್ಲಿ ವ್ಯಾಪಕ ವಾಗಿಯೂ ಹರಿದಾಡುತ್ತಿವೆ. ರಾಜಕೀಯ ನಾಯಕರ ವ್ಯವಸ್ಥಿತ ಅಪಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ ಆಗುತ್ತಿದೆ. ಅಭ್ಯರ್ಥಿ, ಆಕಾಂಕ್ಷಿಗಳೆಂದು ಹೇಳಿಕೊಳ್ಳುವವರು ಇವುಗಳ ಮೂಲಕವೇ ನಿತ್ಯ ಹತ್ತಾರು ಪೋ ಹಂಚಿಕೊಂಡು ಮತ್ತೊಬ್ಬ ಆಕಾಂಕ್ಷಿಯ ತೇಜೋವಧೆ ಮಾಡುವಲ್ಲಿ ನಿರತರಾಗಿದ್ದಾರೆ. ಪ್ರಮುಖ ನಾಯಕರ ಕುರಿತು ವ್ಯಾಪಕ ಟೀಕೆಗೂ ಜಾಲತಾಣ ಬಳಕೆ ಆಗುತ್ತಿದೆ.

ಹಲವು ಸಂದರ್ಭಗಳಲ್ಲಿ ಸಾಮಾಜಿಕ ಅಶಾಂತಿ ಮೂಡಿಸುವಂತಹ ಪೋಸ್ಟ್‌ಗಳನ್ನೂ ಹಾಕಲಾಗುತ್ತಿದೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆಗಳೆಂದರೆ, ಹಳಿಯಾಳದ ಮರಡಿಗುಡ್ಡದ ಘಟನೆ ವಿಚಾರದಲ್ಲಿ ವಾಟ್ಸ್‌ಆಪ್ ಗಳ ಮೂಲಕ ಹರಡಿದ ವದಂತಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಭಟ್ಕಳದ ಶಾಸಕರ ಮನೆಯಲ್ಲಿ ಮಾಂಸದ ಊಟ ಸೇವಿಸಿ ನಾಗಬನ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಎರಡು ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳ ಪೋ ಮೂಲಕ ಬಹಿರಂಗ ಗೊಂಡು ವ್ಯಾಪಕ ಚರ್ಚೆಗೆ ಕಾರಣವಾಯಿತು. ಚುನಾವಣೆಯ ಈ ಹೊತ್ತಲ್ಲಿ ಜಾಲತಾಣದ ಮೂಲಕ ಅಪಪ್ರಚಾರದ ಗೀಳು ಹೆಚ್ಚಾಗಲೂಬಹುದು. ಆದ್ದರಿಂದ ಇದಕ್ಕೆ ತಡೆ ಹಾಕಲು ಪೊಲೀಸರು ಜಾಲತಾಣಗಳ ಮೇಲೆ ನಿಗಾ ಇಡಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಅಶಾಂತಿ, ಅಪಪ್ರಚಾರ ಮಾಡುವವರ ಮೇಲೆ ಕ್ರಮ ಜರುಗಿಸಬೇಕಿದೆ.

Read E-Paper click here