Saturday, 14th December 2024

ಮಳೆ ಅನಾಹುತಕ್ಕೆ ಶಾಶ್ವತ ಪರಿಹಾರ ಅತ್ಯಗತ್ಯ

ಪ್ರಕೃತಿಯ ನಡೆಯನ್ನು ಯಾರೊಬ್ಬರೂ ಗ್ರಹಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ
ಕರ್ನಾಟಕದಲ್ಲಿ ಪ್ರತಿವರ್ಷ ಅತಿವೃಷ್ಠಿ ಅಥವಾ ಅನಾವೃಷ್ಠಿಯಿಂದ ಹಲವು ಸಮಸ್ಯೆ ಎದುರಾಗುತ್ತಿರುವುದು ಎಲ್ಲರ ಗಮನ ದಲ್ಲಿರುವ ವಿಷಯವಾಗಿದೆ.

ಅದರಲ್ಲಿಯೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು, ಕರಾವಳಿ ಹಾಗೂ ಮಲೆನಾಡ ಭಾಗದ ಕೆಲವು ಜಿಲ್ಲೆಗಳಲ್ಲಿ ಪ್ರತಿವರ್ಷ ಮುಂಗಾರು ಮಳೆಯ ಸಮಯದಲ್ಲಿ ಭಾರಿ ಪ್ರಮಾಣದ ನಷ್ಠ ಉಂಟಾಗುತ್ತಿದೆ. ಪ್ರತಿಭಾರಿ ಪ್ರವಾಹ, ನೆರೆ, ಮಳೆಹಾನಿ ಆದಾಗಲೆಲ್ಲ ರಾಜ್ಯ ಹಾಗೂ ಕೇಂದ್ರ ಸರಕಾರ ಸಂತ್ರಸ್ತ ರಿಗೆ ಪರಿಹಾರದ ರೂಪದಲ್ಲಿ ಹಣ ಬಿಡುಗಡೆ ಮಾಡುತ್ತದೆ. ಆದರೆ ಈ ರೀತಿ ನೀಡುವ ಹಣ, ಪೂರ್ಣ ಪ್ರಮಾಣದಲ್ಲಿ ಪರಿಹಾರವನ್ನು ತುಂಬಿಕೊಡುವುದಿಲ್ಲ.

ಆದ್ದರಿಂದ ಪ್ರತಿವರ್ಷ ಈ ರೀತಿಯ ಪ್ರಕೃತಿ ವಿಕೋಪವಾದ ಸಮಯದಲ್ಲಿ ಜನಸಾಮಾನ್ಯರಿಗೆ ಅಪಾರ ಪ್ರಮಾಣದ ಆಸ್ತಿ, ಬೆಳೆಹಾನಿಯಾಗುತ್ತಿದೆ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳ ಸಮಸ್ಯೆ ಒಂದಾದರೆ ರಾಜಧಾನಿ ಬೆಂಗಳೂರಿನ ಸಮಸ್ಯೆ ಇನ್ನೊಂದಾಗಿದೆ. ಒಂದು ಸಣ್ಣ ಮಳೆ ಬಂದರೂ ಬೆಂಗಳೂರಿನ ಹಲವು ಪ್ರದೇಶಗಳು ಕೆರೆಗಳಾಂತಾಗುತ್ತದೆ.

ರಾಜಕಾಲುವೆಯ ನೀರು ಹೊರಬಂದು ಹಲವು ಸಮಸ್ಯೆ ಉಂಟು ಮಾಡುತ್ತಿರುವುದು ಸರಕಾರದ ಗಮನದಲ್ಲಿದ್ದರೂ ಇದಕ್ಕೆ ಪರಿಹಾರವನ್ನು ಮಾತ್ರ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ಎದುರಾಗುವ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿಕೊಂಡು ಬರುತ್ತಿದ್ದಾರೆ ಹೊರತು, ಸಮಸ್ಯೆಗೆ ಪರಿಹಾರ ಮಾತ್ರ ದೊರೆತಿಲ್ಲ. ಆದ್ದರಿಂದ ಇನ್ನಾದರೂ, ಅತಿವೃಷ್ಠಿಯ ಸಮಯವನ್ನು ಎದುರಿಸಲು ರಾಜ್ಯ ಸರಕಾರ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಬೇಕಿದೆ. ಈಗಿರುವ ತಾತ್ಕಲಿಕ ಪರಿಹಾರದಿಂದ ಸಂತ್ರಸ್ತರಿಗೆ ಆ ಸಮಯಕ್ಕೆ ನಿರಾಳವಾಗಬಹುದೇ ಹೊರತು, ಮುಂದಿನ ವರ್ಷಕ್ಕೆ ಪುನಃ
ಈ ಸಮಸ್ಯೆ ಪರಿಹಾರವಾಹುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದ ಆಡಳಿತ ನಡೆಸುವವರು ಇನ್ನಾದರೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ.