Friday, 20th September 2024

ಕಾಮಗಾರಿಗಳಿಗೆ ವೇಗ ನೀಡಬೇಕಿದೆ

ಕರ್ನಾಟಕದಲ್ಲಿ ಲಾಕ್‌ಡೌನ್ ಹೇರಿದ್ದರಿಂದ ಈ ಸಮಯವನ್ನು ಬಳಸಿಕೊಂಡು ರಸ್ತೆ, ಮೇಲ್ಸೇತುವೆ, ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ರಾಜ್ಯದ ಹಲವು ಭಾಗದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಅದರಲ್ಲಿಯೂ ಬೆಂಗಳೂರಿನಲ್ಲಿ ಈ ರೀತಿಯ ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ. ಆದರೀಗ ಲಾಕ್‌ಡೌನ್ ತೆರವಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇದರೊಂದಿಗೆ ಮುಂಗಾರು ಸಹ ಚುರುಕು ಪಡೆದು ಕೊಂಡಿದೆ. ಆದರೆ ಕಾಮಗಾರಿಗಳು ಪೂರ್ಣಗೊಳ್ಳದೇ ಇರುವುದರಿಂದ ರಸ್ತೆಯಲ್ಲಿ ಗುಂಡಿ, ಬದಲಿ ಮಾರ್ಗ ಕಾಣಿಸುತ್ತಿದೆ. ಬೆಂಗಳೂರು ಭಾಗದಲ್ಲಿ ರಸ್ತೆ ಸರಿಯಿದ್ದಾಗ ಮಳೆ ಬಂದರೆ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆ ಯಾಗುವುದನ್ನು ನೋಡಿದ್ದೇವೆ.

ಹೀಗಿರುವಾಗ ಕಾಮಗಾರಿಯ ನೆಪದಲ್ಲಿ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚದೇ ಬಿಟ್ಟರೆ ವಾಹನ ಸವಾರರಿಗೆ ಭಾರಿ ಸಮಸ್ಯೆ ಉಂಟು ಮಾಡುತ್ತದೆ. ಕೆಲವೊಮ್ಮೆ ಈ ನಿರ್ಲಕ್ಷ್ಯಗಳೇ ಕೆಲವರ ಜೀವಕ್ಕೂ ಆಪತ್ತು ತರುವ ಸಾಧ್ಯತೆ ಯಿದೆ. ಆದ್ದರಿಂದ ಬಿಬಿಎಂಪಿ, ಜಲಮಂಡಳಿ ಹಾಗೂ ಸರಕಾರ ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿ ಗಳಿಗೆ ವೇಗ ಕೊಡುವ ಕೆಲಸ ಮಾಡಬೇಕಿದೆ. ಮಂಗಾರು ಇನ್ನಷ್ಟು ತೀವ್ರವಾಗುವ ಮೊದಲೇ ಕಾಮಗಾರಿ ಕೆಲಸ ಪೂರ್ಣ ಗೊಳಿಸಬೇಕು. ಇದರೊಂದಿಗೆ ರಾಜಕಾಲುವೆ ಹೂಳೆತ್ತುವ ಕೆಲಸವನ್ನು ಕೇವಲ ಬಾಯಿ ಮಾತಿಗೆ ಸೀಮಿತ ಗೊಳಿಸದೇ, ಕಾರ್ಯಗತಗೊಳಿಸಬೇಕು ಹಾಗೂ ರಾಜಕಾಲುವೆ ಆಸುಪಾಸಿನಲ್ಲಿರುವ ಜನವಸತಿ ಪ್ರದೇಶ, ತಗ್ಗುಪ್ರದೇಶಗಳಲ್ಲಿ ಮುನ್ನೆ ಚ್ಚರಿಕಾ ಕ್ರಮವಹಿಸಲು ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳಬೇಕು.

ಇಲ್ಲದಿದ್ದರೆ ಪ್ರತಿವರ್ಷದಂತೆಯೇ, ಈ ಬಾರಿ ಒಂದು ದೊಡ್ಡ ಮಳೆಗೆ ಬೆಂಗಳೂರು ನಲುಗುವ ಸಾಧ್ಯತೆ ದಟ್ಟವಾಗಿದೆ. ರಾಜಧಾನಿಯ ಪರಿಸ್ಥಿತಿ ಹೀಗಿದ್ದರೆ,
ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ನದಿಗಳು ಉಕ್ಕಿ ಹರಿಯುವುದರಿಂದ ಪ್ರವಾಹ ಉಂಟಾಗುವ ಸಾಧ್ಯತೆ ಬಹುತೇಕ ನಿಶ್ಚಿತ. ಆದ್ದರಿಂದ ಸರಕಾರ ಈಗಿನಿಂದಲೇ, ಈ ಪರಿಸ್ಥಿತಿಯನ್ನು ಎದುರಿಸಲು, ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದಕ್ಕೆ ಅಗತ್ಯ ಕ್ರಮ ವಹಿಸಬೇಕು.