‘ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ, ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮ’ ಎಂಬ ಪುರಂದರ ದಾಸರ ಗೀತೆಗೆ ಸಾರ್ಥಕತೆ ಒದಗಿದ ಕ್ಷಣ ಗಳಿಗೆ ಭಾರತ ನಿನ್ನೆ (ಜ.೨೨) ಸಾಕ್ಷಿಯಾಯಿತು. ಕಾರಣ, ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯದ ನಿಮಿತ್ತವಾಗಿ ಒಂದಿಡೀ ದೇಶದ ತುಂಬ ವಿವಿಧ ಸ್ವರೂಪಗಳಲ್ಲಿ ‘ರಾಮಭಕ್ತಿ-ರಾಮಶಕ್ತಿ’ ಅನಾವರಣಗೊಂಡಿತು.
ದೇಶದ ಸಮಸ್ತ ಹಿಂದೂ ಬಾಂಧವರ ಭಾವನಾತ್ಮಕ ನಂಟು ಮತ್ತಷ್ಟು ಗಟ್ಟಿಗೊಳ್ಳಲು ಹಾಗೂ ಒಗ್ಗಟ್ಟಿನ ಭಾವ ಮತ್ತಷ್ಟು ದಟ್ಟವಾಗಲು ಈ ಅನುಪಮ ಕ್ಷಣ ಒತ್ತಾಸೆ ನೀಡಿತು ಎಂದರೆ ಅತಿಶಯೋಕ್ತಿ ಆಗಲಾರದು. ‘ಇದರ ಹಿಂದೆ ವೋಟು ಗಳಿಕೆಯ ಉದ್ದೇಶವಿದೆ, ಇದು ಬಹುಸಂಖ್ಯಾತರ ಓಲೈಕೆಯ ಮತ್ತೊಂದು ರೂಪ’ ಎಂಬ ರಾಜಕೀಯ ಲೇಪಿತ ಹೇಳಿಕೆಗಳೇನೇ ಇರಲಿ, ಹಿಂದುತ್ವದ ಅಸ್ಮಿತೆ ಹಾಗೂ ಹಿಂದುಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ಇಂಥದೊಂದು ಸಂದರ್ಭ ಅವಶ್ಯವಾಗಿತ್ತು ಎಂದು ಹೇಳಲಡ್ಡಿಯಿಲ್ಲ.
ಕಾರಣ, ದೇಶದ ಉದ್ದಗಲಕ್ಕೂ ಶ್ರದ್ಧಾವಂತ ಹಿಂದೂಗಳು ರಾಮನ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಕೋಸಂಬರಿ-ಪಾನಕ ಹಂಚಿ ಸಂಭ್ರಮಿಸಿದ್ದು ಸಾಮಾನ್ಯವಾಗಿ ಕಾಣಬರುತ್ತಿದ್ದ ದೃಶ್ಯವಾಗಿತ್ತು ಮತ್ತು ಶ್ರೀರಾಮನವಮಿಯ ಅನುಭೂತಿಯನ್ನು ಅದು ಕಟ್ಟಿಕೊಡುವಂತಿತ್ತು. ರಾಮನ ಪ್ರತಿಷ್ಠಾಪನೆಯಂತೂ ಆಯಿತು, ಇನ್ನು ‘ರಾಮರಾಜ್ಯ’ದ ಪ್ರತಿಷ್ಠಾಪನೆ ಬಾಕಿಯಿದೆ. ಈ ನಿಟ್ಟಿನಲ್ಲಿ ಆಳುಗರೆಲ್ಲರೂ ಕಟಿಬದ್ಧರಾಗಬೇಕಿದೆ, ಅಹರ್ನಿಶಿ ದುಡಿಯಬೇಕಾಗಿದೆ. ಆಗಲೇ ರಾಮನಿಗೆ ಇಂಥದೊಂದು ಭವ್ಯ-ದಿವ್ಯ ಮಂದಿರವನ್ನು ಕಟ್ಟಿದ್ದಕ್ಕೂ ಸಾರ್ಥಕ.