ಮಾರ್ಚ್ 4ರಿಂದ 26ದಿನ ಬಜೆಟ್ ಅಧಿವೇಶನ ನಡೆಯಲಿದ್ದು, ಕರೋನಾ ಸಂಕಷ್ಟದಿಂದ ಬಸವಳಿದ ರಾಜ್ಯದ ಜನರು ಶಕ್ತಿಸೌಧದತ್ತ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ಉಚಿತ ಕೊಡುಗೆಗಳು ಮತ್ತು ಜನಪ್ರಿಯ ಯೋಜನೆಗಳಿಗಿಂತ ಜನರನ್ನು ಸ್ವಾವಲಂಬಿಯಾಗಿಸುವಂತಹ ಮತ್ತು ದುಡಿಮೆಗೆ ಪ್ರೋತ್ಸಾಹ ನೀಡುವಂತಹ ಯೋಜನೆಗಳನ್ನು ಪ್ರಕಟಿಸುವ ಅಗತ್ಯವಿದೆ.
ಅಲ್ಲದೆ, ಸರಕಾರದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ರಾಜ್ಯದ ಜನರ ತೆರಿಗೆ ಹಣ ಪೋಲಾಗ ದಂತೆ ತಡೆಯುವ ಕ್ರಮಗಳನ್ನು ಪ್ರಕಟಿಸ ಬೇಕಿದೆ. ಕೃಷಿ, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ಪಾದಕತೆ ಹೆಚ್ಚಿಸಲು ನೆರವಾಗುವಂತಹ ಯೋಜನೆಗಳಿಗೆ ಅನುದಾನ ಒದಗಿಸ ಬೇಕು. ಈ ಹಿಂದೆ ಘೋಷಣೆಯಾದ ಯೋಜನೆಗಳ ಜಾರಿಯಲ್ಲಾಗಿರುವ ಲೋಪವನ್ನು ಗುರುತಿಸಿ ಸರಿಪಡಿಸುವ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಯೋಜನೆಗಳು ತಲುಪಿಸುವತ್ತ ಗಮನ ಹರಿಸಬೇಕಿದೆ.
ಅಪೂರ್ಣವಾಗಿರುವ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿದ ನಂತರವಷ್ಟೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡರೆ ಒಳಿತು. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್, ಶುದ್ಧ ಕುಡಿಯುವ ನೀರು, ರಸ್ತೆ ಸೇರಿದಂತೆ ಅನೇಕ ಮೂಲ ಸೌಲಭ್ಯಗಳ ಕೊರತೆ ಇದ್ದು, ಅವುಗಳನ್ನು ಪರಿಹರಿಸಲು ಹೊಸ ಹೊಸ ಯೋಜನೆ ಗಳನ್ನು ರೂಪಿಸಬೇಕಿದೆ. ಕರೋನಾ ಕಾಲದಲ್ಲಿ ನಿರುದ್ಯೋಗ ಸಮಸ್ಯೆ ವಿಪರೀತವಾಗಿದೆ. ಅವರಿಗೆಲ್ಲ ಉದ್ಯೋಗ ಸೃಷ್ಟಿಸುವತ್ತ ಹೊಸ ಹೆಜ್ಜೆಯನ್ನಿಡ ಬೇಕಿದೆ. ಹೋಟೆಲ್ ಉದ್ಯಮ ಸೇರಿದಂತೆ ಅನೇಕ ಸ್ವ ಉದ್ಯೋಗಗಳು ನೆಲ ಕಚ್ಚಿದ್ದು, ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳ ಬೇಕಿದೆ.
ಅಲ್ಲದೆ, ಸ್ವ ಉದ್ಯೋಗಿಗಳ ಅಗತ್ಯ ಆರ್ಥಿಕ ನೆರವು ನೀಡುವ ಮೂಲಕ ಅವರ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪ್ರತೀ ನಗರದಲ್ಲಿ ವಿಶೇಷ ತರಬೇತಿ ಹೊಂದಿದ ಸಿಬ್ಬಂದಿಯನ್ನು ಒಳಗೊಂಡ ಪ್ರತ್ಯೇಕ ತನಿಖಾ ವಿಭಾಗ ರಚಿಸಬೇಕಿದೆ. ಕಚೇರಿಗಳಲ್ಲಿ ಲಂಚಾವತಾರ ಹೆಚ್ಚುತ್ತಿರುವ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ದೂರುಗಳು ದಾಖಲಾಗುತ್ತಿದ್ದು, ಅದರ ನಿಗ್ರಹಕ್ಕೆ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಭ್ರಷ್ಟಾಚಾರ ತಡೆಗೆ ದಿಟ್ಟ ಹೆಜ್ಜೆ ಇಡಬೇಕಿದೆ. ಒಟ್ಟಾರೆ ಈ ಬಜೆಟ್ ಮೇಲೆ
ರಾಜ್ಯದ ಜನರ ನಿರೀಕ್ಷೆ ಹೆಚ್ಚಾಗಿದ್ದು, ಸರಕಾರ ಸೂಕ್ತ ಬಜೆಟ್ ಮಂಡಿಸಲಿ.