ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವರ ಎದುರು ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ ಗೊಂಡಿದ್ದರಿಂದ ಹಾಗೂ ಉಳಿದ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದ ಕಾರಣ, ಬಿಜೆಪಿಯ ಮುಕೇಶ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದ್ದು ಕೆಲ ದಿನಗಳ ಹಿಂದೆ ವರದಿಯಾದ ವಿದ್ಯಮಾನ. ಹೀಗೆ ಅಖಾಡದಿಂದ ಹಿಂದಡಿ ಇಟ್ಟವರ ಯಾದಿಗೆ ಇನ್ನೆರಡು ನಿದರ್ಶನಗಳು ಸೇರಿವೆ.
ಒಂದೆಡೆ, ‘ಚುನಾವಣಾ ಪ್ರಚಾರಕ್ಕೆ ಹಣವಿಲ್ಲ’ ಎಂಬ ಕಾರಣ ಮುಂದುಮಾಡಿ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತ ಮೊಹಾಂತಿ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರೆ, ಮತ್ತೊಂದೆಡೆ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಅವರು ಕೂಡ ಕೊನೇ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂರೂ ನಿದರ್ಶನಗಳ ಹಿಂದೆ ನಡೆದಿರಬಹುದಾದ ರಾಜಕೀಯ
ತಂತ್ರಗಾರಿಕೆಯನ್ನು ಬಿಡಿಸಿ ಹೇಳಬೇಕಿಲ್ಲ ಮತ್ತು ತತ್ಪರಿಣಾಮವಾಗಿ ಆಯಾ ಕ್ಷೇತ್ರದ ರಾಜಕೀಯ ಎದುರಾಳಿಗಳು ಒಳಗೊಳಗೇ ನಗುತ್ತಿರಬಹುದು.
ಆದರೆ ಇವು ಪ್ರಜಾಪ್ರಭುತ್ವದ ನೈಜ ಆಶಯಕ್ಕೆ ಧಕ್ಕೆ ತರುವಂಥ ಮತ್ತು ಅದರ ತಳಹದಿಗೆ ಕೊಡಲಿಪೆಟ್ಟು ನೀಡುವಂಥ ಘಟನೆಗಳಾಗಿವೆ ಎನ್ನಲಡ್ಡಿಯಿಲ್ಲ. ಇಂದೋರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ದು ತಪ್ಪು ಎಂದು ಲೋಕಸಭೆ ಮಾಜಿ ಸ್ಪೀಕರ್ ಮತ್ತು ಸ್ವತಃ ಬಿಜೆಪಿ ನಾಯಕಿಯೂ ಆಗಿರುವ ಸುಮಿತ್ರಾ ಮಹಾಜನ್ ಅವರು ಅಸಮಾಧಾನ ವ್ಯಕ್ತಪಡಿಸಿರುವುದು ಇಲ್ಲಿ ಉಲ್ಲೇಖಾರ್ಹ. ಯಾವುದೇ ಮತಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಬಾರದು ಎಂದಾಗಲೀ ಅಥವಾ ಯಾವುದೇ ಪಕ್ಷದ ಅಭ್ಯರ್ಥಿಗಳು ಕೊನೇ ಕ್ಷಣದಲ್ಲಿ ನಾಮಪತ್ರವನ್ನು ಹಿಂತೆಗೆದುಕೊಳ್ಳಬಾರದು ಎಂದಾಗಲೀ ಇಲ್ಲಿನ ಅಭಿಪ್ರಾಯವಲ್ಲ. ಆದರೆ ಇಂಥ ಬೆಳವಣಿಗೆಗಳಿಗೆ ಜನರು ಸಮ್ಮತಿಸುವಂಥ ಕಾರಣಗಳಿರಬೇಕಷ್ಟೇ.
ಜನರು ತಮ್ಮಿಷ್ಟದ ಪ್ರತಿನಿಧಿಯನ್ನು ಆರಿಸುವಂತಾಗಲಿ, ತನ್ಮೂಲಕ ಜನರ ಹಿತರಕ್ಷಣೆ ಮಾಡಬಲ್ಲ ಸರಕಾರವೊಂದು ಅಸ್ತಿತ್ವಕ್ಕೆ ಬರುವಂತಾಗಲಿ ಎಂಬ ಕಾರಣಕ್ಕೇ ಚುನಾವಣೆಯನ್ನು ನಡೆಸುವುದು. ಆದರೆ ಆ ಸದಾಶಯಕ್ಕೇ ಧಕ್ಕೆಯಾದರೆ ಪ್ರಯೋಜನವೇನು?