Sunday, 15th December 2024

ದಿಢೀರ್ ನಿರ್ಧಾರ ತಂದೊಡ್ಡಿದ ಸಮಸ್ಯೆ

ರಾಜ್ಯ ಸರಕಾರ ಈ ಬಾರಿ ಪಟಾಕಿ ನಿಷೇಧ ಘೋಷಿಸಿ ಆದೇಶಿಸಿದೆ. ಜನತೆಯ ಆರೋಗ್ಯ ಕಾಳಜಿ ನಿಟ್ಟಿನಲ್ಲಿ ಇದೊಂದು ಮಹತ್ವದ
ಬೆಳವಣಿಗೆ.

ಆದರೆ ದಿಢೀರ ನಿರ್ಧಾರದಿಂದಾಗಿ ಬಹಳಷ್ಟು ಬದುಕುಗಳು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ಪಟಾಕಿ ಸಿಡಿಸುವು ದರಿಂದ ಮಾಲಿನ್ಯದ ಜತೆಗೆ ಕರೋನಾ ಸೋಂಕು ಸಹ ಉಲ್ಬಣವಾಗುವ ಸಾಧ್ಯತೆಯಿದೆ ಎನ್ನುವುದು ನಿಷೇಧಕ್ಕೆ ಇರುವ ಕಾರಣ.

ಈಗಾಗಲೇ ಮಾರಾಟಗಾರರು ಸಂಗ್ರಹಿಸಿರುವ ಪಟಾಕಿ ಮಾರಾಟಮಾಡಲು ಸಾಧ್ಯವಿಲ್ಲವಾದರೆ, ಆಗುವ ನಷ್ಟಕ್ಕೆ ಹೊಣೆಯಾರು ಎಂಬುದು ಮಾರಾಟಗಾರರ ಅಳಲು. ಜತೆಗೆ ತಯಾರಿಕ ಕಂಪನಿಗಳ ಸ್ಥಿತಿ, ನೌಕರರಿಗೆ ಪರ್ಯಾಯ ವ್ಯವಸ್ಥೆಗಳೇನು ಎಂಬುದು ಮತ್ತೊಂದು ಆಯಾಮ. ಸರಕಾರದ ಯಾವುದೇ ಆದೇಶಗಳು ಒಳಿತಿಗಾಗಿಯೇ ಜಾರಿಗೊಳಿಸಲಾಗುತ್ತದೆ. ಆದರೆ ಅವುಗಳಿಂದಾಗುವ ಕೆಲವು ದುಷ್ಪರಿಣಾಮಗಳ ನಿವಾರಣೆಗೂ ಆದ್ಯತೆ ನೀಡಬೇಕಿರುವುದು ಮುಖ್ಯ.

ರಾಜ್ಯದ ಹೊಸಕೋಟೆ ತಾಲೂಕು ಒಂದರಲ್ಲಿಯೇ 10ಕೋಟಿಗೂ ಅಧಿಕ ಮೌಲ್ಯದ ಪಟಾಕಿ ಖರೀದಿಯಾಗಿದೆ. ಇವು ಮಾರಾಟ ವಾಗದಿದ್ದರೆ, ಸಂಗ್ರಹಕರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ಕೇವಲ ಮಾರಾಟಗಾರರೇ ಈ ಪ್ರಮಾಣದಲ್ಲಿ ನಷ್ಟ ಅನುಭವಿಸು ವಂತಾದರೆ, ಇನ್ನು ತಯಾರಿಕ ಕಂಪನಿಗಳು ಎದುರಿಸ ಬಹುದಾದ ನಷ್ಟದ ಪ್ರಮಾಣ ಕೋಟಿಗಳನ್ನು ದಾಟಲಿದೆ. ಪಟಾಕಿ
ಕಾರ್ಖಾನೆಗಳ ನಷ್ಟ ಆ ಕಾರ್ಖಾನೆಯ ಕಾರ್ಮಿಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಕರೋನಾ ಸೋಂಕು ಹರಡಲಾರಂಭಿಸಿದ ದಿನಗಳಲ್ಲಿಯೇ ಈ ನಿರ್ಧಾರವನ್ನು ಪ್ರಕಟಿಸಿದ್ದರೆ, ತಯಾರಿಕೆ ಕಂಪನಿಗಳಿಗೆ ನಷ್ಟದ ಪ್ರಮಾಣ ಕಡಿಮೆಯಾಗುತ್ತಿತ್ತು. ಮೊದಲೆ ಪಟಾಕಿ ಕಂಪನಿಗಳಿಗೆ, ತಯಾರಿಕರಿಗೆ ಸೂಚನೆ ನೀಡಿ, ನಂತರ ನಿಷೇಧಿಸುವುದು ಸೂಕ್ತವಾಗಿತ್ತು. ಆದರೆ ಸರಕಾರದ ಈ ದಿಢೀರ್ ನಿರ್ಧಾರದಿಂದಾಗಿ ಪಟಾಕಿ ಕಂಪನಿಗಳು, ಮಾರಾಟಗಾರರು ಸಂಕಷ್ಟಕ್ಕೆ ಸಿಲುಕು ವಂತಾಗಿದೆ.