Friday, 20th September 2024

ಸಿಎಂ ಆಯ್ಕೆ ಬಗ್ಗೆ ಇರಲಿ ಎಚ್ಚರ

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಿಯಾಗಿದೆ. ಈ ಮೂಲಕ ಕಳೆದ ಕೆಲ ತಿಂಗಳುಗಳಿಂದ ರಾಜ್ಯ ಬಿಜೆಪಿ ಹಾಗೂ ಸರಕಾರದಲ್ಲಿ ಆಗುತ್ತಿದ್ದ ಹಲವು ಗೊಂದಲಗಳಿಗೆ ತಾರ್ತಿಕ ಅಂತ್ಯ ಕಂಡಿದೆ.

ಯಡಿಯೂರಪ್ಪ ಅವರ ನಿರ್ಗಮನದ ಕಾರಣಕ್ಕೆ ಇದೀಗ ಹೊಸ ಮುಖ್ಯಮಂತ್ರಿಯ ಹುಡುಕಾಟದಲ್ಲಿ ಬಿಜೆಪಿ ವರಿಷ್ಠರಿದ್ದಾರೆ. 2008 ರಲ್ಲಿಯೂ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕವೂ ಇದೇ ಪರಿಸ್ಥಿತಿ ಯಿತ್ತು. ಆದರೆ ಆಗ ಬಾಕಿಯಿದ್ದ ಎರಡು ವರ್ಷದ ಅಧಿಕಾರಾವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಬಿಜೆಪಿ ಕರ್ನಾಟಕಕ್ಕೆ ನೀಡಿತ್ತು. ಇದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿತ್ತು. ಈಗಲೂ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ, ಯಡಿಯೂರಪ್ಪ ಅವರಿಂದ ರಾಜೀನಾಮೆ ಯನ್ನು ವರಿಷ್ಠರು ಪಡೆದಿದ್ದಾರೆ.

ಲಿಂಗಾಯತ ಸಮುದಾಯದ ವಿರೋಧ, ಕರ್ನಾಟಕದಲ್ಲಿರುವ ಕರೋನಾ ಹಾವಳಿ ಹಾಗೂ ಪ್ರವಾಹ ಪರಿಸ್ಥಿತಿಯ ನಡುವೆ ಇದೀಗ ಮ್ತೊಮ್ಮೆ ಮುಖ್ಯುಮಂತ್ರಿ ಹಾಗೂ ಸಚಿವ ಸಂಪುಟವಿಲ್ಲದೇ, ಹಂಗಾಮಿ ಮುಖ್ಯಮಂತ್ರಿಯೊಂದಿಗೆ ಸರಕಾರವನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸೂಕ್ಷ್ಮ ಸಮಯದಲ್ಲಿ ಯಾರೇ ಮುಖ್ಯಮಂತ್ರಿ ಯಾದರೂ ಆರಂಭದಲ್ಲಿ ಈ ಎಲ್ಲ ಜವಾಬ್ದಾರಿಯನ್ನು ನಿಭಾಯಿಸುವುದು ಕಷ್ಟದ ಕೆಲಸವಾಗಿರುತ್ತದೆ.

ಇತರ ರಾಜ್ಯದಲ್ಲಿರುವ ರಾಜಕೀಯಕ್ಕಿಂತ ಕರ್ನಾಟಕ ರಾಜಕಾರಣ ವಿಭಿನ್ನವಾಗಿರುವುದರಿಂದ ಬಿಜೆಪಿ ವರಿಷ್ಠರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ವೇಲೆ ಎಚ್ಚರಿಕೆ ಇಂದ ಇರಬೇಕು. ಜನರ ಆಶೋತ್ತರಗಳನ್ನು ಈಡೇರಿಸುವ, ಈ ಸಂಕಷ್ಟ ಪರಿಸ್ಥಿತಿಯನ್ನು ನಿಭಾಯಿಸುವ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕಿದೆ. ಆದ್ದರಿಂದ ಈ ವಿಷಯದಲ್ಲಿ ಬಿಜೆಪಿ ವರಿಷ್ಠರು ಎಚ್ಚರಿಕೆಯ ಹೆಜ್ಜೆಯಿಡುವುದು ಸೂಕ್ತ.