ನಾಯಕರಾದವರು ಅಥವಾ ಸಾರ್ವಜನಿಕ ಜೀವನದಲ್ಲಿರುವವರು ಯಾವತ್ತೂ ಇತರರಿಗೆ ಮಾದರಿಯಾಗಿ ಇರಬೇಕು ಎನ್ನುವುದು ಅಪೇಕ್ಷಣೀಯ. ಅವರ ನಡೆ-ನುಡಿಗಳು ಬಹಳ ಎಚ್ಚರಿಕೆಯಿಂದ ಕೂಡಿರಬೇಕು. ಯಾಕೆಂದರೆ ಅವರಿಗೆ ಅಸಂಖ್ಯ ಅಭಿಮಾನಿಗಳು ಮತ್ತು ಅನುಯಾಯಿಗಳು ಇರುತ್ತಾರೆ. ಅವರೆಲ್ಲರಿಗೂ ತಮ್ಮ ನಾಯಕ ಆಡಿದ್ದು, ಮಾಡಿದ್ದು ಎಲ್ಲವೂ ಮಾದರಿಯಾಗಿಯೇ ಕಾಣುತ್ತದೆ.
ಸಾರ್ವಜನಿಕರ ಮೇಲೆ ಅಪಾರ ಪ್ರಭಾವ ಬೀರುವ ಶಕ್ತಿಯಿರುವ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ತಮ್ಮ ನಡೆ-ನುಡಿಗಳಲ್ಲಿ ಹಾದಿ ತಪ್ಪುತ್ತಿದ್ದಾರೆ. ತಮ್ಮ ಹುದ್ದೆಗೆ ತಕ್ಕುದಲ್ಲದ ಮತ್ತು ಅಸಭ್ಯತೆಯ ಪದಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಎದುರಾಳಿಗಳನ್ನು ಟೀಕಿಸುವಾಗ ಈ ಚಾಳಿ ಇನ್ನೂ ಹೆಚ್ಚಾಗಿ ಜಾಗೃತಗೊಳ್ಳುತ್ತದೆ.
ಏಕವಚನದಿಂದ ಮಾತನಾಡಿಸುವುದು, ತಾಕತ್ತಿದ್ದರೆ ತಡೆಯಿರಿ ಎನ್ನು ವಂತಹ ಸವಾಲು ಹಾಕುವುದು- ಇವೆಲ್ಲ ಅಪೇಕ್ಷಣೀಯ ಮಾತುಗಳಲ್ಲ. ಎದುರಾಳಿಗಳ ವೈಯಕ್ತಿಕ ಬದುಕಿನ ಎಳೆಗಳನ್ನು ಹಿಡಿದುಕೊಂಡು ಹೀಯಾಳಿಸುವ, ಹಣಿಯುವ, ತೇಜೋವಧೆ ಮಾಡುವ ಮೂಲಕ ಕಟ್ಟಿಹಾಕುವ ಯತ್ನಗಳು ಸಾಕಷ್ಟು ಕಂಡುಬರುತ್ತವೆ. ಅಂತಹ ವರ್ತನೆಗಳಿಗೆ ಕಡಿವಾಣ ಹಾಕುವ ಅಂತಃಶಕ್ತಿ ಮುಖಂಡರಲ್ಲಿ ಇರಬೇಕು. ಬಾಯಿತಪ್ಪಿ ಆಡಿದ ಮಾತಿಗೆ ಕನಿಷ್ಠ ಪಕ್ಷ ವಿಷಾದಿಸುವ ಸಜ್ಜನಿಕೆಯಾದರೂ ಇರಬೇಕು. ಮಾಜಿ ಪ್ರಧಾನಿ- ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಂತಹ ಮುತ್ಸದ್ದಿಗಳ ಮಾತುಗಳು ಯಾವತ್ತೂ ಕೇಳಲು ಚಂದ, ಅಷ್ಟೇ ಅಲ್ಲ,
ಪ್ರೇರಣಾದಾಯಿಯಾಗಿರುತ್ತಿದ್ದವು.
ವಾಜಪೇಯಿ ರಾಜಕೀಯ ಎದುರಾಳಿಗಳನ್ನು ಟೀಕಿಸುವಾಗಲೂ ಅತ್ಯಂತ ತೀಕ್ಷ್ಣವಾದ ಪರಿಣಾಮ ಉಂಟಾಗುವಂತೆ ಮಾತನಾಡಬಲ್ಲವರಾಗಿದ್ದರು, ಆದರೆ ಎಂದು ತಪ್ಪು ಪದಗಳನ್ನು ಬಳಕೆ ಮಾಡುತ್ತಿರಲಿಲ್ಲ. ಇನ್ನು ಏಕವಚನದಲ್ಲಿ ಕರೆಯುವ, ನಿಂದಿಸುವ ಪ್ರವೃತ್ತಿ ಕೆಲವು ರಾಜಕಾರಣಿಗಳಲ್ಲಿದೆ. ಆತ್ಮೀಯತೆ, ಸ್ನೇಹದಿಂದ ಏಕವಚನದಲ್ಲಿ ಕರೆದರೆ ತಪ್ಪಲ್ಲ. ಆದರೆ ಸಾರ್ವಜನಿಕವಾಗಿ ಸಂಬೋಧಿಸುವಾಗ ಮಿತ್ರನೇ ಇರಲಿ, ಶತ್ರುವೇ ಆಗಿರಲಿ- ಕನಿಷ್ಠ ಪಕ್ಷ ಬಹುವಚನದಲ್ಲಿ ಮಾತ
ನಾಡಿಸಿ ಗೌರವದಿಂದ ನಡೆದುಕೊಳ್ಳಬೇಕೆಂಬುದು ಪ್ರಸ್ತುತವಾದ ಸಂಗತಿ.
ಅಪದ್ಧ ಮಾತುಗಳು ಆಡುವವನ ಘನತೆಯನ್ನೇ ಮಣ್ಣುಪಾಲು ಮಾಡುತ್ತದೆ ಎಂಬ ಅರಿವಿದ್ದರೆ ಇಂತಹ ನಡವಳಿಕೆಗಳು ತಾನಾಗಿಯೇ ಕಡಿಮೆಯಾದಾವು.