Thursday, 12th December 2024

ತೆರಿಗೆ ಕಡಿತಕ್ಕೆ ಚಿಂತನೆ; ಸ್ವಾಗತಾರ್ಹ

ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು, ಸಾರ್ವಜನಿಕ ವಲಯದಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ತೈಲ ಬೆಲೆ ಏರಿಕೆಗೆ, ಕಚ್ಚಾ ತೈಲ ಬೆಲೆಯೊಂದಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಧಿಸುತ್ತಿರುವ ದುಬಾರಿ ತೆರಿಗೆಯೂ ಕಾರಣ. ಆಂದ ಮಾತ್ರಕ್ಕೆ, ತೈಲೋತ್ಪನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ರಾಜ್ಯಗಳಿಗೆ ಇರುವ ಬಹುದೊಡ್ಡ ಆದಾಯ ಮೂಲವೇ ನಿಂತು ಹೋಗುತ್ತದೆ.

ಆದ್ದರಿಂದ ಈ ನಡೆಗೆ ಯಾವ ರಾಜ್ಯ ಸರಕಾರಗಳು ಒಪ್ಪುವುದಿಲ್ಲ. ಆದರೀಗ ಕರ್ನಾಟಕ ಸರಕಾರ, ತಮ್ಮ ಆರ್ಥಿಕ ಇತಿಮಿತಿಯಲ್ಲಿ ಪೆಟ್ರೋಲ್-ಡಿಸೇಲ್ ಮೇಲಿನ ತೆರಿಗೆ ಹಾಗೂ ಸೆಸ್ ಅನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿರುವುದು ಸ್ವಾಗತಾರ್ಹ. ತೆರಿಗೆ ಇಳಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವತಃ ಹೇಳಿಕೆ ನೀಡಿದ್ದು, ಉಪಚುನಾವಣೆ ಬಳಿಕ ಸರಕಾರದ ಆರ್ಥಿಕ ಸ್ಥಿತಿಗತಿಯನ್ನು ನೋಡಿಕೊಂಡು, ನಿರ್ಧರಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ಈಗಾಗಲೇ ತಮಿಳುನಾಡು ಸರಕಾರ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ತೆರಿಗೆ ಇಳಿಸಿದೆ. ಈ ಹಿಂದೆ ಮೈತ್ರಿ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಈ ರೀತಿಯ ನಿರ್ಣಯವನ್ನು ಕೈಗೊಂಡಿದ್ದರು. ಈಗ ಬೊಮ್ಮಾಯಿ ನೇತೃತ್ವದ ಸರಕಾರವೂ, ಇಂತಹ ಮಹತ್ವದ ತೀರ್ಮಾನ ಕೈಗೊಂಡರೆ, ಅನೇಕರಿಗೆ ಸಹಾಯ ವಾಗಲಿದೆ. ಅಂದ ಮಾತ್ರಕ್ಕೆ, ಪೆಟ್ರೋಲ್-ಡಿಸೇಲ್ ಮೇಲಿನ ತೆರಿಗೆ ಹೆಚ್ಚು ಪ್ರಮಾಣದಲ್ಲಿಯೂ ಕಡಿತವಾಗುವ ಸಾಧ್ಯತೆಯಿಲ್ಲ. ಏಕೆಂದರೆ, ತೆರಿಗೆ ಕಡಿತದ ಜತೆಜತೆಯಲ್ಲಿ, ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಎಚ್ಚರವಹಿಸಬೇಕಿದೆ.

ಬೊಮ್ಮಾಯಿ ಅವರು ಕೈಗೊಳ್ಳುವ ನಿರ್ಧಾರದಿಂದ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಗರಿಷ್ಠ ಎರಡರಿಂದ ಮೂರು ರುಪಾಯಿ ಕಡಿತವಾಗಲಿದೆ. ಇದರಿಂದ ಭಾರಿ ಪ್ರಮಾಣದ ಬದಲಾವಣೆಯಾಗದಿದ್ದರೂ, ಕೊಂಚ ಪ್ರಮಾಣದಲ್ಲಿ ಯಾದರೂ ಜನರಿಗೆ ಸಹಾಯವಾಗಲಿದೆ.