Thursday, 12th December 2024

ಮಳೆ ಮುನ್ಸೂಚನೆ ತಂತ್ರಜ್ಞಾನ ಸರಿಪಡಿಸಲಿ

ಜುಲೈನಲ್ಲಿ ವಿಪರೀತ ಮಳೆ ಸುರಿಯುವ ಸಾಧ್ಯತೆ ಇದ್ದು, ಮುಂಗಾರಿನ ವಾಡಿಕೆ ಪ್ರಮಾಣದ ಬಹುಪಾಲು ಮಳೆ ಇದೇ ತಿಂಗಳಲ್ಲಿ ಸುರಿ
ಯಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ಅಸಾನಿ ಚಂಡಮಾರತದ ಪರಿಣಾಮವೋ ಏನೋ, ಮೇ ಆರಂಭದಲ್ಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿಯಲಾರಂಭಿಸಿದೆ.

ಇದರಿಂದ ಅನೇಕ ಕಡೆ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಮ್ಮ ದೇಶದಲ್ಲಿ ಮಳೆಯ ಮುನ್ಸೂಚನೆಗೆ ಬಳಕೆಯಾಗುತ್ತಿರುವ ತಂತ್ರಜ್ಞಾನ ನಿರಂತರವಾಗಿ ಸುಧಾರಣೆ ಆಗುತ್ತಿದ್ದರೂ ಹವಾಮಾನ ಇಲಾಖೆಯು ಕೊಡುವ ಸೂಚನೆಗಳು ಶೇಕಡಾ ನೂರರಷ್ಟು ನಿಖರವಾಗಿಲ್ಲ. ಕೆಲವೊಮ್ಮೆ ವಾತಾವರಣ ಕೊಡುವ ಸೂಚನೆಯನ್ನು ಗ್ರಹಿಸಲು ಕೂಡ ಅದಕ್ಕೆ ಸಾಧ್ಯವಾಗುವುದಿಲ್ಲ. ಹವಾಮಾನ ಇಲಾಖೆಯು ದೀರ್ಘಾವಧಿ, ವಿಸ್ತರಿತ ಅವಧಿ, ಅಲ್ಪಾವಧಿ ಮತ್ತು ಅಲ್ಪ- ಮಧ್ಯಮಾವಧಿ ಮುನ್ಸೂಚನೆಯನ್ನು ನೀಡುತ್ತದೆ. ದೀರ್ಘಾವಧಿಯ ನಿಖರತೆ ಉತ್ತಮವಾಗಿದ್ದರೂ ವಿಸ್ತರಿತ ಅವಧಿಯ ಮುನ್ಸೂಚನೆ ನಿಖರವಾಗಿರುವುದಿಲ್ಲ. ಈ ಅವಧಿಯ ಮುನ್ಸೂಚ ನೆಯೇ ಕೃಷಿಕರಿಗೆ ಅಗತ್ಯವಾಗಿ ಬೇಕಿದೆ.

ವಿಸ್ತರಿತ ಅವಧಿಯ ಮುನ್ಸೂಚನೆಯು ನಿಖರವಾಗಿ ದೊರೆಯದೇ ಇದ್ದರೆ, ರೈತರು ಬೆಳೆದ ಬೆಳೆ ನೀರು ಪಾಲಾಗುವುದು ಅಥವಾ ನೀರಿಲ್ಲದೇ ಒಣಗುವುದು ಈ ಹಿಂದಿನಿಂದ ನೋಡುತ್ತಲೇ ಬಂದಿದ್ದೇವೆ. ಸರಿಯಾದ ಮಳೆಯ ಮುನ್ಸೂಚನೆ ಕೊಡಲಿಲ್ಲ ಎಂಬ ಕಾರಣಕ್ಕೆ ಕಳೆದ ವರ್ಷ ಮಧ್ಯ ಪ್ರದೇಶದ ಕಿಸಾನ್ ಸಂಘವು ಹವಾಮಾನ ಇಲಾಖೆ ವಿರುದ್ಧವೇ ಮೊಕದ್ದಮೆ ಹೂಡಿದ್ದು ನೆನಪಿರಬೇಕು. ಹೀಗಾಗಿ ದೇಶದಲ್ಲಿ ಮಳೆಯ ಮುನ್ಸೂಚನೆಗೆ ಬಳಕೆಯಾಗುತ್ತಿರುವ ತಂತ್ರಜ್ಞಾನ ಇನ್ನಷ್ಟು ಸುಧಾರಣೆಯಾಗಬೇಕಾದ ಅಗತ್ಯವಿದೆ.

ರಾಜ್ಯದಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ರಾಜ್ಯ ಸರಕಾರವು ಎಲ್ಲ ಕಡೆಗಳಲ್ಲಿ ಬೀಜ ಮತ್ತು ಗೊಬ್ಬರದ ದಾಸ್ತಾನು ಅಗತ್ಯ ಪ್ರಮಾಣದಲ್ಲಿ ಇರುವಂತೆಯೂ ನೋಡಿಕೊಳ್ಳಬೇಕಿದೆ. ಮಳೆಯ ಮುನ್ಸೂಚನೆಯ ಜಿವಾರು ವಿವರಗಳನ್ನು ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆಯೊಂದನ್ನು ಹಾಕಿಕೊಂಡು ಕಾರ್ಯ ಪ್ರವೃತ್ತರಾಗಬೇಕಿದೆ. ಜುಲೈನಲ್ಲಿ ಹೇರಳ ವಾಗಿ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಕೆರೆ-ಕಟ್ಟೆಗಳ ಹೂಳನ್ನು ಈಗಲೇ ತೆಗೆಯಿಸಿ, ಒಡ್ಡುಗಳನ್ನು ಸದೃಢಗೊಳಿಸಬೇಕು. ಕೃಷಿ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವ ಮೂಲಕ ಮಳೆ ನೀರು ಸಂಗ್ರಹಕ್ಕೆ ಅವಕಾಶ ಮಾಡಿಕೊಳ್ಳಬೇಕು.