ದಿನಸಿ ಅಂಗಡಿಯವರು, ತರಕಾರಿ ವ್ಯಾಪಾರಿಗಳು, ಆಟೋ-ಟ್ಯಾಕ್ಸಿ ಚಾಲಕರು ಸೇರಿದಂತೆ ಬಹುತೇಕ ಕಡೆ ೧೦ ರುಪಾಯಿಯ ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.
ಯಾರನ್ನೇ ಕೇಳಿದರೂ ‘ಈ ನಾಣ್ಯ ಚಲಾವಣೆಯಲ್ಲಿಲ್ಲ’ ಎಂಬ ಉತ್ತರ ಬರುವುದು ಸಾಮಾನ್ಯವಾಗಿದೆ. ೧೦ ರುಪಾಯಿ ನಾಣ್ಯದ ಚಲಾವಣೆ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತವಾಗಿ ಎಲ್ಲೂ ಹೇಳದಿದ್ದರೂ ಜನರ ಬಾಯಿಂದ ಬಾಯಿಗೆ ಇಂಥ ಸುಳ್ಳು ಸುದ್ದಿಯೊಂದು ಹರಡಿ ಈ ನಾಣ್ಯಗಳ ಚಲಾವಣೆಗೆ ಕುತ್ತು ಬಂದಿದೆ. ಆರ್‌ಬಿಐ ಕಾಲಕಾಲಕ್ಕೆ ವಿಶಿಷ್ಟ ಲಕ್ಷಣಗಳುಳ್ಳ ನಾಣ್ಯಗಳನ್ನು ಬಿಡುಗಡೆ ಮಾಡುತ್ತದೆ. ಪ್ರಸ್ತುತ ೫೦ ಪೈಸೆ, ೧,೨,೫, ೧೦ ಮತ್ತು ೨೦ ರು. ಮುಖ ಬೆಲೆಯ ವಿವಿಧ ಗಾತ್ರ-ವಿನ್ಯಾಸದ ನಾಣ್ಯಗಳು ಚಲಾವಣೆಯಲ್ಲಿವೆ.
ಕೆಲವು ಕಡೆ ಇಂಥ ನಾಣ್ಯಗಳ ಅಸಲಿಯತ್ತಿನ ಬಗ್ಗೆ ಜನರಲ್ಲಿ ಅನುಮಾನಗಳಿವೆ. ಪರಿಣಾಮ, ಕೆಲವು ವ್ಯಾಪಾರಿಗಳು, ಅಂಗಡಿಕಾರರು, ವಾಣಿಜ್ಯ ಸಂಸ್ಥೆಗಳು, ರಾಜ್ಯ ರಸ್ತೆ ಸಾರಿಗೆ ನಿಗಮ, ಸರಕಾರಿ, ಅರೆ ಸರಕಾರಿ, ಸರಕಾರೇತರ ಸಂಸ್ಥೆಗಳು, ಇಲಾಖೆಯ ಸಿಬ್ಬಂದಿ, ಆಟೊ-ಟ್ಯಾಕ್ಸಿ ಚಾಲಕರು ಮತ್ತು ಸಾರ್ವ ಜನಿಕರು ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ. ಇವರೆಲ್ಲರ ಮನಸ್ಸಿನಲ್ಲಿ ಇಂಥ ಶಂಕೆ ಬಿತ್ತುವ ಮೂಲಕ, ಆರ್‌ಬಿಐನಿಂದ ಮಾನ್ಯತೆ ಪಡೆದಿರುವ ನಾಣ್ಯಗಳ ಚಲಾವಣೆಗೆ ವಿನಾಕಾರಣ ತೊಡಕು ಉಂಟುಮಾಡುವುದು ಸರಿಯಲ್ಲ.
ಆ ನಾಣ್ಯಗಳನ್ನು ಸ್ವೀಕರಿಸದೇ ಇರುವುದು ನಾಣ್ಯ ಕಾಯಿದೆ-೨೦೧೧ರ ಸೆಕ್ಷನ್ ೬(೧) ರ ಉಲ್ಲಂಘನೆಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಇಂಥ ವದಂತಿಗೆ ಸಾರ್ವಜನಿಕರು ಕಿವಿಗೊಡದಂತೆ ಹಾಗೂ ಯಾವುದೇ ಹಿಂಜರಿಕೆ ಇಲ್ಲದೇ ಈ ನಾಣ್ಯಗಳನ್ನು ಎಂದಿನಂತೆಯೇ ಶಾಸನಬದ್ಧ ಚಲಾವಣೆಯಾಗಿ ಸ್ವೀಕರಿಸುವುದನ್ನು ಮುಂದುವರಿಸುವಂತೆ ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಆದ್ದರಿಂದ ವ್ಯಾಪಾರಿಗಳು ತಮ್ಮ ಅನುಮಾನಗಳನ್ನು ಬದಿಗಿಟ್ಟು ನಿಯತವಾಗಿ ಚಲಾವಣೆಗೆ ಬಂದ ವಿವಿಧ ಮುಖಬೆಲೆಯ ಎಲ್ಲ ನಾಣ್ಯಗಳನ್ನು ಕಾನೂನುನಾತ್ಮಕವಾಗಿ ಸ್ವೀಕರಿಸಬೇಕು.
ಈ ಕುರಿತು ಜಿಲ್ಲಾಽಕಾರಿಗಳು ಎಲ್ಲ ವ್ಯಾಪಾರಿಗಳನ್ನು ಉದ್ದೇಶಿಸಿ ಪ್ರಕಟಣೆ ಹೊರಡಿಸಬೇಕು.