ಕರ್ನಾಟಕ ಉಗ್ರರ ಅಡಗು ತಾಣವಾಗುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಇತ್ತೀಚಿನ ಪ್ರಕರಣಗಳನ್ನು ಗಮನಿಸಿದಾಗ ಉದ್ಭವಿಸುತ್ತಿದೆ.
ಹತ್ತು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲೇ ಇದ್ದು, ನಾಗರಿಕರ ನಡುವೆಯೇ ವೇಷ ಮರೆಸಿಕೊಂಡಿದ್ದ ಪಾಕಿಸ್ತಾನಿ ಮೂಲದ ಹಿಜ್ಬಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್‌ನ್ನಲಾದ ತಾಲೀಬ್ ಹುಸೇನ್ ಬಂಧನದೊಂದಿಗೆ ರಾಜ್ಯದ ಆತಂಕ ಇನ್ನಷ್ಟು ಹೆಚ್ಚಿದೆ.
ಹಾಗೆ ನೋಡಿದರೆ, ಅಧಿಕೃತ ಅಂಕಿ ಅಂಶಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರರ ಸಂಖ್ಯೆ ಕೇಳಿದರೆ ನಿಜಕ್ಕೂ ಆತಂಕ ಮೂಡು ತ್ತದೆ. ಕಳೆದ ವರ್ಷದ ಜೂನ್ ತಿಂಗಳಿನಿಂದ ಇಲ್ಲಿವರೆಗೆ ರಾಜ್ಯದಲ್ಲಿ ಒಟ್ಟು ಎಂಟು ಶಂಕಿತ ಉಗ್ರರನ್ನು ಸೆರೆ ಹಿಡಿಯಲಾಗಿದ್ದು, ಈ ಉಗ್ರರನ್ನು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಒಂದೇ ವರ್ಷದಲ್ಲಿ ಎಂಟು ಉಗ್ರರನ್ನು ಪತ್ತೆ ಹಚ್ಚಿರುವುದು ಇದೇ ಮೊದಲು. ಈ ಹಿಂದೆ ಕೇರಳದಲ್ಲಿ ಐಸಿಸ್ ನೇಮಕ ಪ್ರಕರಣದಲ್ಲಿ ಅಮರ್ ಅಬ್ದುಲ್ ರೆಹಮಾನ್ ಹಾಗೂ ಶಂಕರ್ ವೆಂಕಟೇಶ್ ಪೆರುಮಾಳ್ ಎಂಬವ ರನ್ನು ಬಂಧಿಸಲಾಗಿತ್ತು.
ಬೆಂಗಳೂರಿನಲ್ಲಿದ್ದುಕೊಂಡು ಐಸಿಸ್ ನೇಮಕದಲ್ಲಿ ತೊಡಗಿದ್ದ ಜೋಯೆಬ್ ಮನ್ನಾ, ಇರ್ಫಾನ್ ನಾಸೀರ್, ಮಹಮ್ಮದ್ ತಕ್ವೀರ್, ಅಹಮ್ಮದ್ ಖಾದರ್ ಎಂಬವರನ್ನು ಬಲೆಗೆ ಕೆಡವಲಾಗಿತ್ತು. ಬಳಿಕ ಇದೇ ಜನವರಿಯಲ್ಲಿ ಐಸಿಸ್ ಜತೆ ಸಂಪರ್ಕ ಇಟ್ಟುಕೊಂಡಿದ್ದ ಬಗ್ಗೆ ದೀಪ್ತಿ ಮಾಲರ್ ಎಂಬ ಮಹಿಳೆಯನ್ನು ಮಂಗಳೂರಿನಲ್ಲಿ ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ತಾಲೀಬ್ ಹುಸೇನ್ ಎಂಬಾತನನ್ನು ಜಮ್ಮು ಕಾಶ್ಮೀರ ಮತ್ತು ರಾಜ್ಯ ಪೊಲೀಸರು ಬೆಂಗಳೂರಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ನಗರದಲ್ಲಿ ವಾಸವಾಗಿದ್ದ ತಾಲೀಬ್ ನನ್ನು ಕಾಶ್ಮೀರ ಪೊಲೀಸರು ಬಂಧಿಸುವವರೆಗೂ ಉಗ್ರನ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರಲಿಲ್ಲ ಎಂದು ಖುದ್ದು ಪೊಲೀಸ್ ಆಯುಕ್ತರು ಹೇಳಿರುವುದು ಆತಂಕಕಾರಿ ವಿಚಾರವಾಗಿದೆ.
ನಿವೃತ್ತರ ಸ್ವರ್ಗ, ಉದ್ಯಾನ ನಗರಿ, ಶಾಂತಿಯ ತೋಟ ಎಂದೆಲ್ಲ ಹೆಸರಾಗಿದ್ದ ಬೆಂಗಳೂರಿನ ಪ್ರಖ್ಯಾತಿಯನ್ನು ಉಳಿಸಲು, ಸರಕಾರ, ಪೊಲೀಸರು ಹಾಗೂ ನಾಗರಿಕರು ಜಂಟಿಯಾಗಿ ಪ್ರತಿಜ್ಞೆ ಮಾಡಬೇಕಿದೆ.