ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುವ ಬಗ್ಗೆ ಚರ್ಚೆಯಾಗುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಆ ಪಕ್ಷದ ಸಿದ್ಧಾಂತಕ್ಕೆ ತಕ್ಕಂತೆ ಪಠ್ಯಪುಸ್ತಕಗಳು ರೂಪುಗೊಳ್ಳುವ ಪರಿಪಾಟ ಶುರುವಾಗಿದೆ. ಈ ಹಿಂದೆ ಬಿಜೆಪಿ ನೇತೃತ್ವದ ಸರಕಾರ ಇzಗ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಶಾಲಾ ಪಠ್ಯಪುಸ್ತಕ ಪರಿಷ್ಕರಿಸಿತ್ತು.
ಅದು ವಿವಾದದ ಕಿಚ್ಚನ್ನೂ ಹಚ್ಚಿತ್ತು. ಅನೇಕ ಲೇಖಕರು, ಸಾಹಿತಿಗಳು, ಚಿಂತಕರು ತಮ್ಮ ಕವಿತೆ, ಲೇಖನಗಳನ್ನು ವಾಪಸ್ ಪಡೆದಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಈಗ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಪಠ್ಯಪುಸ್ತಕ ಪರಿಷ್ಕರಣೆಗೆ ಚಿಂತಿಸುತ್ತಿದೆ. ಈ ಕುರಿತು ಸ್ವತಃ ಸಚಿವರೇ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದ ಶೇ.೯೦ರಷ್ಟು ಪಠ್ಯಪುಸ್ತಕಗಳು ಮುದ್ರಣಗೊಂಡು ಶಾಲೆಗಳಿಗೆ ತಲುಪಿವೆ. ಈ ಹಂತದಲ್ಲಿ ಅವುಗಳನ್ನು ವಾಪಸ್ ಪಡೆದು ಪಠ್ಯವಿಷಯ ಪರಿಷ್ಕರಿಸಿ ಮರು ಮುದ್ರಣ ಮಾಡುವುದು ಸಮಂಜಸ ವಲ್ಲ. ಅಲ್ಲದೆ, ಸರಕಾರಕ್ಕೇ ಆರ್ಥಿಕ ಹೊರೆಯೂ ಆಗಲಿದೆ.
ವಾಸ್ತವವಾಗಿ ಇಂದಿನ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಸರಕಾರ ಬದಲಾದಂತೆಲ್ಲ ತಮ್ಮ ಮೂಗಿನ ನೇರಕ್ಕೆ ಪಠ್ಯ ಪರಿಷ್ಕರಿಸಿ ಮಕ್ಕಳನ್ನು ಗೊಂದಲಕ್ಕೀಡು ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ಮತೀಯ ರಾಜರ ಯುದ್ಧದ ಇತಿಹಾಸಕ್ಕಿಂತ ಸದ್ಯದ ಪರಿಸ್ಥಿತಿಯಲ್ಲಿ ಮಳೆನೀರು ಸಂಗ್ರಹ, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನದಿಂದ ಆಗುತ್ತಿರುವ ಹಾನಿ ಮತ್ತು ತಡೆ, ವೃತ್ತಿಪರ ಕೌಶಲ ಹಾಗೂ ಮಾನವೀಯ ಮೌಲ್ಯಗಳ ಕುರಿತು ಹೆಚ್ಚಿನ ಜ್ಞಾನದ ಅಗತ್ಯವಿದೆ.
ಈ ದಿಸೆಯಲ್ಲಿ ಸರಕಾರ ಮತ್ತು ಪಠ್ಯ ತಜ್ಞರು ಚಿಂತಿಸಬೇಕಿದೆ. ಈಗಾಗಲೇ ಮುದ್ರಣಗೊಂಡ ಪಠ್ಯಪುಸ್ತಕಗಳನ್ನು ಮುಂದುವರಿಸಬೇಕಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದು ಶಾಶ್ವತ ಪಠ್ಯಪುಸ್ತಕ ಆಯೋಗವನ್ನು ರಚಿಸಿ, ಅದಕ್ಕೆ ಕಾನೂನಿನ ಮಾನ್ಯತೆ ನೀಡಲಿ. ಆ ಮೂಲಕ ಯಾವುದೇ ಪಕ್ಷ ತನ್ನ ಸಿದ್ಧಾಂತಕ್ಕೆ ತಕ್ಕಂತೆ ಪಠ್ಯಪುಸ್ತಕ ಬದಲಾವಣೆ ಮಾಡುವುದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕಿದೆ.