Wednesday, 9th October 2024

ಮೂರನೇ ಅಲೆ ಬಗ್ಗೆ ಇರಲಿ ಎಚ್ಚರ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾಜ್ಯ ಸರಕಾರ ಈಗಾಗಲೇ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಹೇರಲಾಗಿದೆ. ಆದರೆ ಬೆಂಗಳೂರಿನಲ್ಲಿ ಇನ್ನು ಈ ರೀತಿಯ ನಿಯಮಗಳು ಜಾರಿ ಯಾಗಿಲ್ಲ. ಈಗಾಗಲೇ ಎರಡನ ಅಲೆಯಲ್ಲಿ ಆಗಿರುವ ಅನಾಹುತವನ್ನು ನೋಡಿದ್ದೇವೆ.

ಅದರಲ್ಲಿಯೂ ರಾಜಧಾನಿ ಬೆಂಗಳೂರು ಕರೋನಾ ರಣಕೇಕೆಗೆ ನಲುಗಿ ಹೋಗಿತ್ತು. ಆದ್ದರಿಂದ ತಜ್ಞರು ಮೂರನೇ ಅಲೆಯ ಎಚ್ಚರಿಕೆಯನ್ನು ನೀಡುತ್ತಿರುವಾಗಲೇ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸ ಬೇಕಿದೆ. ಇದರೊಂದಿಗೆ ಎರಡನೇ ಅಲೆಯಲ್ಲಿ ಎದುರಾದ ಔಷಧ, ಆಕ್ಸಿಜನ್ ಹಾಗೂ ಬೆಡ್‌ಗಳ ಸಮಸ್ಯೆ ಯಾಗದ ರೀತಿಯಲ್ಲಿ ಎಚ್ಚರಿಕೆವಹಿಸಬೇಕಿದೆ.

ಮೂರನೇ ಅಲೆ ನಿಯಂತ್ರಣದಲ್ಲಿ ಸರಕಾರದ ಜತೆ ಸಾರ್ವಜನಿಕ ಪಾತ್ರವೂ ಮಹತ್ವದ್ದಾಗಿದೆ. ಅನ್‌ಲಾಕ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ತಿರುಗಾಡುವ ಬದಲು, ಸಾಧ್ಯವಾದಷ್ಟು ಜನಸಂದಣಿ ಇರುವ ಪ್ರದೇಶದಿಂದ ಅಂತರ ಕಾಯ್ದುಕೊಳ್ಳಬೇಕಿದೆ. ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿರುವ ಆಪತ್ತಿನಿಂದ ಎಚ್ಚೆತ್ತು ಸರಕಾರ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡುವ ಮೊದಲೇ, ಜನರೇ ಈ ಹಿಂದೆ ಅನುಸರಿಸುತ್ತಿದ್ದ ಕಠಿಣ ಕ್ರಮವನ್ನು ಅಳವಡಿಸಿಕೊಳ್ಳುವುದು ಸೂಕ್ತ. ಸರಕಾರ ತಗೆದುಕೊಳ್ಳುವ ಕ್ರಮಕ್ಕಿಂತ ಹೆಚ್ಚಾಗಿ ಜನರಲ್ಲಿ ಜಾಗೃತಿ ಮೂಡಿ ದಾಗ ಮಾತ್ರ ಮೂರನೇ ಅಲೆ ನಿಯಂತ್ರಿಸುವುದಕ್ಕೆ ಸಾಧ್ಯ.

ಇನ್ನು ಈ ಬಾರಿ ಸರಕಾರ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸಮಸ್ಯೆಯಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿರುವುದರಿಂದ, ಈಗಿನಿಂದಲೇ ತಯಾರಿ ಆರಂಭಿಸಿಕೊಂಡು, ಅಗತ್ಯ ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು. ಅಂತಿಮವಾಗಿ, ಈಗಾಗಲೇ ಆರ್ಥಿಕ ಪರಿಸ್ಥಿತಿ ಹದಗೆಟ್ಟಿ ರುವ ಈ ಸಮಯದಲ್ಲಿ, ಮತ್ತೊಮ್ಮೆ ಲಾಕ್‌ಡೌನ್ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ಸರಕಾರ ವಾಗಲಿ, ಜನರಾಗಲಿ ತಂದುಕೊಳ್ಳದಂತೆ ಎಚ್ಚರವಹಿಸ ಬೇಕಿದೆ. ಏಕೆಂದರೆ ಲಾಕ್‌ಡೌನ್ ಒಂದೇ ಕರೋನಾಕ್ಕೆ ಪರಿಹಾರವಲ್ಲ.