Tuesday, 12th November 2024

ಬರಹಗಾರರಿಗೆ ಬೆದರಿಕೆ ನಿರ್ಲಕ್ಷಿಸುವಂತಿಲ್ಲ

ಇತ್ತೀಚಿನ ದಿನಗಳಲ್ಲಿ ಬರಹಗಾರರ ಜೀವಕ್ಕೆ ಬೆದರಿಕೆಯೊಡ್ಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ
ಪ್ರಯತ್ನಗಳು ರಾಜ್ಯದಲ್ಲಿ ಹೆಚ್ಚುತ್ತಿದೆ. ಕಳೆದ ಮೂರು ತಿಂಗಳಲ್ಲಿ ನಾಡಿನ ಅನೇಕ ಬರಹಗಾರರಿಗೆ ಹತ್ತೊಂಬತ್ತು ಬೆದರಿಕೆ ಪತ್ರಗಳು ಬಂದಿವೆ.

ಬರಹಗಾರರನ್ನು ಹೆದರಿಸುವುದಕ್ಕೆ ಹಾಗೂ ಅವರ ಚಾರಿತ್ರ್ಯಹರಣಕ್ಕೆ ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಳ್ಳ ಲಾಗುತ್ತಿದೆ. ಈ ಬೆದರಿಕೆ ಗಳು ಯಾರೋ ಕಿಡಿಗೇಡಿಗಳು ಕೆಲಸವಿಲ್ಲದ್ದಕ್ಕೆ ಮಾಡಿರಬಹುದು ಎಂದು ನಿರ್ಲಕ್ಷಿಸುವಂತಿಲ್ಲ. ಹೀಗೆ ನಿರ್ಲಕ್ಷಿಸುವುದರಿಂದ ಕಿಡಿಗೇಡಿಗಳಿಗೆ ಕೃತ್ಯ ವೆಸಗಲು ಮತ್ತಷ್ಟು ಅನುಕೂಲವಾಗುವ ಸಾಧ್ಯತೆ ಇದೆ. ವೈಚಾರಿಕತೆಯನ್ನು
ಹಾಗೂ ಭಿನ್ನಾಭಿಪ್ರಾಯಗಳನ್ನು ಹಿಂಸೆಯ ಮೂಲಕ ಹತ್ತಿಕ್ಕಲು ಬಯಸುವುದು, ಆ ಮೂಲಕ ಸಾಮೂಹಿಕವಾಗಿ ಭಯ ಹುಟ್ಟಿಸುವ ಪ್ರಯತ್ನಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಭೂತ ಆಶಯಗಳನ್ನು ದುರ್ಬಲಗೊಳಿಸುವಂತಹವು.

ಅನಾಮಿಕ ಕಿಡಿಗೇಡಿಗಳು ಒಡ್ಡುವ ಬೆದರಿಕೆಗಳು ಬರಹಗಾರರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದಷ್ಟೇ ಅಲ್ಲದೆ, ಅವರ ಕುಟುಂಬದವರು ಆತಂಕದೊಂದಿಗೆ ಜೀವನ ನಡೆಸುವ ಪರಿಸ್ಥಿತಿ ಸೃಷ್ಟಿಸುತ್ತದೆ. ಜೀವಭಯದೊಂದಿಗೆ ಬದುಕು ಸಾಗಿಸುವಂತಹ ಸ್ಥಿತಿ ರೂಪುಗೊಳ್ಳುವುದು ಕಾನೂನು ಸುವ್ಯವಸ್ಥೆ ಇರುವ ರಾಜ್ಯದಲ್ಲಿ ಇರಬಾರದು. ಬರಹಗಾರರು ಹಾಗೂ ಅವರ ಕುಟುಂಬ ನಿರ್ಭಯದಿಂದ ಜೀವನ ಸಾಗಿಸಲು ಅಗತ್ಯವಾದ ಮುಕ್ತ ವಾತಾವರಣವನ್ನು ಕಲ್ಪಿಸುವುದು ಸರಕಾರದ ಕರ್ತವ್ಯ.

ವ್ಯತಿರಿಕ್ತ ಅಭಿಪ್ರಾಯಗಳು ಎದುರಾದಾಗ ಅವುಗಳನ್ನು ಎದುರಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನೇಕ ದಾರಿಗಳಿವೆ. ಕಾನೂನು ಕ್ರಮದ ಮೂಲಕ ವೈಚಾರಿಕ ಸಂಘರ್ಷ ನಡೆಸಲಿಕ್ಕೆ ಅವಕಾಶವಿದೆ. ಈ ಮಾರ್ಗ ಗಳನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಯಾರಿಗೂ ಅವಕಾಶವಿಲ್ಲ. ಅಭಿಪ್ರಾಯಭೇದಗಳು ಹಿಂಸೆಗೆ ಕಾರಣವಾಗದಂತೆ ಸಮಾಜ ಎಚ್ಚರಿಕೆ
ವಹಿಸಬೇಕು. ಹಿಂಸೆಯನ್ನು ಉತ್ತೇಜಿಸುವ ಹಾಗೂ ಹಿಂಸಾಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಇಲ್ಲವಾದಲ್ಲಿ ಸಮಾಜದಲ್ಲಿ ವಿಮರ್ಶೆ ಮಾಡುವುದೇ ಒಂದು ಅಪರಾಧ ವೆಂಬ ಭಾವನೆ ಸೃಷ್ಟಿಯಾಗುವ ಅಪಾಯವಿದೆ. ರಾಜಕಾರಣಿಗಳು ಕೂಡ ಕೋಮುಸೌಹಾರ್ದ ಕದಡುವ ಮಾತುಗಳನ್ನಾಡಬಾರದು. ದ್ವೇಷದ ಮಾತುಗಳನ್ನಾಡುವ ನಾಯಕರ ವಿರುದ್ಧ ಆಯಾ ಪಕ್ಷಗಳು ಕ್ರಮ ಕೈಗೊಳ್ಳುವ ಮೂಲಕ ಸಂವಿಧಾನಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಬೇಕು.