Saturday, 14th December 2024

ಅಭಿವೃದ್ಧಿಯನ್ನು ಅಣಕಿಸದಿರಲಿ ಶೌಚಾಲಯಗಳ ಸಮಸ್ಯೆ

ದೇಶದ ಜನರಿಗೆ ಸ್ವಚ್ಛತೆಯ ಮಹತ್ವ ತಿಳಿಸುವಲ್ಲಿ ಸ್ವಚ್ಛ ಭಾರತ ಅಭಿಯಾನ ಮಹತ್ವದ ಬೆಳವಣಿಗೆ. ಅಭಿಯಾನದ ನಂತರ ಸ್ವಚ್ಛತೆ ವಿಷಯದಲ್ಲಿ ದೇಶದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಮತ್ತೊಮ್ಮೆ ಮತ್ತಷ್ಟು ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಪರಿಪೂರ್ಣ ಗೊಳಿಸುವ ಪ್ರಯತ್ನಕ್ಕೆ ಸರಕಾರ ಆದ್ಯತೆ ನೀಡಬೇಕಿರುವ ಅನಿವಾರ್ಯತೆ ಎದುರಾಗಿದೆ.

ಭಾರತವನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ. ಆದರೆ ದೇಶವು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಯಲು ಶೌಚ ಮುಕ್ತವಾಗಿಲ್ಲ ಎಂಬುದನ್ನು ಇರುವಂಥ ಸಮಸ್ಯೆಗಳೇ ಸಾಬೀತುಪಡಿಸಿದೆ. ಕೆಲವೆಡೆ ಶೌಚಾಲಯದ ವ್ಯವಸ್ಥೆಗಳಿದ್ದರೂ ಅವುಗಳನ್ನು ಬಳಸಲಾಗುತ್ತಿಲ್ಲ. ಮತ್ತೆ ಕೆಲವೆಡೆ ಶೌಚಾಲಯಗಳ ಅಗತ್ಯವಿದ್ದರೂ ಶೌಚಾಲಯಗಳಿಲ್ಲ. ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ಶೌಚಾಲಯಗಳಿದ್ದರೂ ಶೇ.44 ಜನರು ಬಳಸುತ್ತಿಲ್ಲ ಎಂಬ ಅಂಶಗಳನ್ನು ಕೆಲವು ಸಮೀಕ್ಷೆಗಳು ಬಹಿರಂಗಪಡಿಸಿವೆ.

ಕರ್ನಾಟಕ ರಾಜ್ಯ ಇಂಥದೊಂದು ಸಮಸ್ಯೆಯನ್ನು ಎದುರಿಸುತ್ತಿಲ್ಲ ಎಂಬುದು ಸಂತಸದ ಸಂಗತಿ. ಕರ್ನಾಟಕ ರಾಜ್ಯ ‘ಐಟಿ ಸಿಟಿ’ಯಾಗಿ ಕಂಗೊಳಿಸುತ್ತಿದ್ದರೂ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲದ ಕಾರಣ ಜನರು ರಸ್ತೆಪಕ್ಕದಲ್ಲಿಯೇ ಮೂತ್ರ ವಿಸರ್ಜನೆ ಮಾಡುವಂಥ ಘಟನೆಗಳು ಕಂಡುಬರುತ್ತಿವೆ. ರಾಜ್ಯದ
ರಾಜಧಾನಿ ಬೆಂಗಳೂರಿನಂಥ ನಗರಕ್ಕೆ 6349 ಸಾರ್ವಜನಿಕ ಶೌಚಾಲಯ ಹಾಗೂ 15020 ಸಮುದಾಯ ಶೌಚಾಲಯಗಳ ಅಗತ್ಯವಿದೆ. ಆದರೆ
ಹಾಲಿ 2070 ಸಾರ್ವಜನಿಕ ಹಾಗೂ 268 ಸಮುದಾಯ ಶೌಚಾಲಯಗಳು ಮಾತ್ರವೇ ಇದೆ. ಇದರಿಂದ ಬಹಳಷ್ಟು ಜನರು ರಸ್ತೆ ಪಕ್ಕದಲ್ಲಿಯೇ ಮೂತ್ರ
ವಿಸರ್ಜಿಸುವಂಥ ಘಟನೆಗಳು ಕಂಡುಬರುತ್ತಿದೆ. ಇಂಥ ಘಟನೆಗಳು ಸ್ವಚ್ಛತೆಗೆ ಮಾರಕವಾಗುವುದರ ಜತೆಗೆ ಅಭಿವೃದ್ಧಿಯ ಆಶಯಗಳನ್ನು ಅಣಕಿಸುವಂಥ ಬೆಳವಣಿಗೆಯೂ ಹೌದು.