ಶುಕ್ರವಾರ ಸಂಜೆ ಒಡಿಶಾದ ಬಾಲಸೋರ್‌ನ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಹೌರಾಕ್ಕೆ ಹೋಗುವ ಎಸ್‌ಎಂವಿಪಿ-ಹೌರಾ ಸೂಪರ್ – ಎಕ್ಸ್‌ಪ್ರೆಸ್ ರೈಲುಗಳ ನಡುವೆ ಸಂಭವಿಸಿದ ಅಪಘಾತವು ಕಳೆದ ೧೫ ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾಗಿದೆ.
ಘಟನೆಯಲ್ಲಿ ಸುಮಾರು ೨೮೮ ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂಬುದು ಪ್ರಾರ್ಥನೆ. ಈ ಘಟನೆಗೆ ಇಡೀ ವಿಶ್ವವೇ ಮರುಕ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದೆ. ಉದ್ಯಮಿಗಳು, ಸಂಘ-ಸಂಸ್ಥೆಗಳು ಮೃತರ ಕುಟುಂಬಗಳಿಗೆ ಪರಿಹಾರ ಕಲ್ಪಿಸುವುದಾಗಿ, ಮೃತಪಟ್ಟವರ ಮಕ್ಕಳಿಗೆ ಮುಂದಿನ ಶಿಕ್ಷಣವನ್ನು ನೋಡಿಕೊಳ್ಳುವುದಾಗಿ ಘೋಷಿಸಿ ದ್ದಾರೆ.
ಆಸ್ಪತ್ರೆಗಳಲ್ಲಿ ಕೂಡ ಗಾಯಾಳುಗಳಿಗೆ ರಕ್ತ ನೀಡಲು ದಾನಿಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಇವೆಲ್ಲವೂ ಜನರಲ್ಲಿ ಮಾನವೀಯತೆ ಇನ್ನೂ ಇದೆ ಎಂಬುದನ್ನು ಸಾಬೀತುಪಡಿಸಿವೆ. ಆದರೆ ಕೆಲವು ಕಿಡಿಗೇಡಿಗಳು ಈ ಘಟನೆಯಲ್ಲೂ ಹುಳುಕು ಹುಡುಕುವ ಕೆಲಸ ಮಾಡುತ್ತಿರುವುದು ದುರದೃಷ್ಟಕರ. ರೈಲು ದುರಂತ ನಡೆದ ಸ್ಥಳದಲ್ಲಿ ಮಸೀದಿ ಯೊಂದರ ಚಿತ್ರ ತೋರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವ ಮೂಲಕ ಈ ಘಟನೆಗೆ ಕೋಮು ಬಣ್ಣವನ್ನು ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಅಪಘಾತದ ಕಾರಣ ಮತ್ತು ಇತರ ಎಲ್ಲ ಅಂಶಗಳ ಕುರಿತು ಒಡಿಶಾದ ಜಿಆರ್‌ಪಿಯಿಂದ ತನಿಖೆ ನಡೆಯುತ್ತಿದೆ. ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್
ಸಿಸ್ಟಂ ಸಮಸ್ಯೆಯಿಂದ ಈ ಅವಘಡ ಸಂಭವಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಅದಾಗ್ಯೂ ಹೆಚ್ಚಿನ ತನಿಖೆ ನಡೆಯುತ್ತಿದ್ದು,
ಸಮಗ್ರ ತನಿಖೆಯ ನಂತರವೇ ಸತ್ಯಾಸತ್ಯತೆ ಗೊತ್ತಾಗಲಿದೆ. ಆದರೆ ಅದಕ್ಕೂ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುಳ್ಳು, ದುರುದ್ದೇಶ ಪೂರಿತ ಪೋಸ್ಟ್‌ಗಳನ್ನು ಹಾಕುವ ಮೂಲಕ ಕೋಮು ಸಂಘರ್ಷ ಸೃಷ್ಟಿಸುವ ಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಪೊಲೀಸರು ವದಂತಿಗಳನ್ನು ಹರಡುವವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ.