Saturday, 14th December 2024

ಸಾಮರಸ್ಯಕ್ಕಾಗಿ ಯುಸಿಸಿ ಜಾರಿ ಆಧುನಿಕ ಭಾರತದ ಅಗತ್ಯ

ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿರುವಾಗಲೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ರಾಜಕೀಯ ಕಾರಣಗಳನ್ನು ಹೊರತು ಪಡಿಸಿ, ಜಾತಿ, ಧರ್ಮ, ಪ್ರಾಂತ್ಯ ಭೇದಗಳನ್ನು ಮೀರಿ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕೆಂಬ ಆಶಯ ಸಂವಿಧಾನದ ೪೪ನೇ ವಿಧಿಯಲ್ಲೇ ಪ್ರತಿಪಾದಿಸಲ್ಪಟ್ಟಿದೆ.

ಹಾಗೆ ನೋಡಿದರೆ, ದೇಶದಲ್ಲಿ ಸದ್ಯಕ್ಕೆ ಕ್ರಿಮಿನಲ್ ಕಾನೂನು ಎಲ್ಲರಿಗೂ ಸಮಾನ ವಾಗಿದೆ. ಅಪರಾಧಕ್ಕೆ ಯಾವುದೇ ಜಾತಿ, ಧರ್ಮಗಳ ಭೇದ ಇಲ್ಲ. ಆದರೆ ವೈಯಕ್ತಿಕ ಕಾನೂನು, ಸಿವಿಲ್ ಕಾನೂನು ಮಾತ್ರ ಧರ್ಮಕ್ಕನುಗುಣವಾಗಿ ಭಿನ್ನವಾಗಿವೆ. ನಮ್ಮಲ್ಲಿನ ಹಲವು ಸಾಮಾಜಿಕ ಸಮಸ್ಯೆಗಳಿಗೆ ಯುಸಿಸಿ ಪರಿಹಾರ ಮಾರ್ಗವಾಗಲಿದೆ ಎಂಬುದು ತಜ್ಞರ ಅಭಿಮತ. ಎಲ್ಲರಿಗೂ ಎಲ್ಲ ಕಾನೂನುಗಳೂ ಒಂದೇ ಆದಾಗ ದೇಶದಲ್ಲಿ ಸಮಗ್ರತೆ, ಏಕತೆ ಹಾಗೂ ಸಮಾನತೆ ಮೂಡುತ್ತದೆ ಎಂಬುದರಲ್ಲಿ ಅನು ಮಾನವಿಲ್ಲ.

ಧರ್ಮ ಸಮನ್ವಯವಾದಾಗ ಸಹಜವಾಗಿ ಬಾಂಧವ್ಯ ವೃದ್ಧಿಯೂ ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಭಿನ್ನತೆಯಲ್ಲಿ ಏಕತೆಯ ಗುಣಮೈಗೂಡಿಸಿಕೊಂಡಿರುವ ಭಾರತದಂಥ ದೇಶದಲ್ಲಿ, ಪ್ರಜಾಪ್ರಭುತ್ವ ಬಲಗೊಳ್ಳಲು ಎಲ್ಲ ಧರ್ಮಗಳ ಜನರಿಗೂ ಒಂದೇ ಕಾನೂನು ಜಾರಿಯಲ್ಲಿರು ವುದು ವಿಹಿತ. ಜಾತ್ಯತ್ಯೀತ ದೇಶದಲ್ಲಿ ಸಮಾನ ಹಕ್ಕುಗಳಂತೆಯೇ ಸಮಾನ ಕರ್ತವ್ಯವೂ ವಿಧಿಸಲ್ಪಡಬೇಕಿದೆ. ಇಲ್ಲದಿದ್ದರೆ, ಒಬ್ಬ ವ್ಯಕ್ತಿಗೆ ಮತ್ತೊಬ್ಬನಿಗಿಂತಲೂ ಹೆಚ್ಚಿನ ಕಾನೂನಿನ ಅವಕಾಶಗಳು ಸಿಕ್ಕು, ಸಾಮಾಜಿಕ ಸಮಾನತೆಯಲ್ಲಿ ಏರುಪೇರಾಗುತ್ತದೆ.

ಹಾಗೆಂದ ಮಾತ್ರಕ್ಕೆ ಧಾರ್ಮಿಕ ಹಕ್ಕುಗಳು ಮೊಟಕುಗೊಳ್ಳುವ ಪ್ರಶ್ನೆಯೇ ಇಲ್ಲ. ಸಂವಿಧಾನದ ವಿಧಿ ೨೫ ಹಾಗೂ ೨೮ರ ಅಡಿ
ಪ್ರಜೆಗಳಿಗೆ ತಂತಮ್ಮ ಧಾರ್ಮಿಕ ಆಚರಣೆಗಳನ್ನು ಪಾಲಿಸಲು ಅವಕಾಶ ಇದೆಯಾದರೂ ವಿವಾಹ, ವಿಚ್ಛೇದನದಂಥ ಆಚರಣೆಗಳ ಪ್ರಶ್ನೆ ಬಂದಾಗ ಅಥವಾ ಅದು ವಿವಾದವಾದಾಗ ಕಾನೂನಿನ ತೊಡಕುಗಳು ಎದುರಾಗುತ್ತವೆ. ಇಂಥ ಸಲ್ಲದ ವೈವಿಧ್ಯ, ಈಗಾಗಲೇ ಸಮಾಜದಲ್ಲಿ ಅಸ್ಥಿರತೆಯನ್ನು ಮೂಡಿಸಿದೆ. ಆದ್ದರಿಂದ ಏಕರೂಪ ಕಾನೂನು ಜಾರಿಯಾಗುವುದರಿಂದ ಒಂದು ವರ್ಗದ ವರಲ್ಲಿ ಪ್ರತ್ಯೇಕತೆಯ ಭಾವ ಮೂಡುತ್ತದೆ, ಅಭದ್ರತೆ ಸೃಷ್ಟಿಯಾಗುತ್ತೆಂಬವಾದ ಹುರುಳಿಲ್ಲದ್ದು. ವ್ಯಕ್ತಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಹಿಂದೂ, ಸಿಖ್ ಎಂಬುದಕ್ಕಿಂತ ಈ ನೆಲದಲ್ಲಿ ವಾಸಿಸುತ್ತಿದ್ದರೆ ಆತ ಭಾರತೀಯ ಪ್ರಜೆಯಷ್ಟೇ.

ಹೀಗಾಗಿ ಆತ ಈ ನೆಲದ ಕಾನೂನಿಗೆ ಬದ್ಧನಾಗಿರಲೇಬೇಕು. ಹಾಗೆ ನೋಡಿದರೆ ೧೮೬೭ರಿಂದಲೇ ಗೋವಾದಲ್ಲಿ ಈ ಕಾನೂನು ಜಾರಿಯಲ್ಲಿಲ್ಲವೇ? ಈ ದೃಷ್ಟಿಯಿಂದ ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಯುಸಿಸಿ ಕಾನೂನು ಆದಷ್ಟು ಶೀಘ್ರ ಜಾರಿಗೊಳ್ಳಬೇಕು. ಈ ಬಗ್ಗೆ ವ್ಯಾಪಕ ಚರ್ಚೆ ಆಗಬೇಕಿರುವುದರ ಜತೆಗೇ ಬದಲಾಗುತ್ತಿರುವ ಭಾರತದಲ್ಲಿ ಇಂಥವೂ ಬದಲಾಗಬೇಕಿದೆ.