Saturday, 14th December 2024

ನಿರುದ್ಯೋಗ ನಿವಾರಣೆಗೆ ಅದ್ಭುತ ಯೋಜನೆ

ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ನಿವಾರಣೆಗಾಗಿ ಕೇಂದ್ರ ಸರಕಾರ ಮಾಸ್ಟರ್ ಪ್ಲಾನ್ ಮಾಡಿದ್ದು ಸ್ವಾಗತಾರ್ಹ.

ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷ ಜನರಿಗೆ ತ್ವರಿತವಾಗಿ ಉದ್ಯೋಗ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೂಚಿಸಿದ್ದಾರೆ. ಇದರ ಜತೆಗೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೈನಿಕರ ನೇಮಕಕ್ಕಾಗಿ ಅಗ್ನಿ ಪಥ ಎಂಬ ಯೋಜನೆಯನ್ನು ಸರಕಾರ ಪ್ರಕಟಿಸಿದೆ. ಈ ಯೋಜನೆಯ ಮೂಲಕ ಸೈನಿಕರ ನೇಮಕದಲ್ಲಿ ಆಮೂಲಾಗ್ರ ಬದಲಾವಣೆ ಉಂಟಾಗಲಿದೆ.

ಈ ಯೋಜನೆಯ ಮೂಲಕ ಯುವಜನರಿಗೆ 4 ವರ್ಷದ ಅವಧಿಗೆ ಸೇನೆಯ ತ್ರಿವಿಧ ದಳಗಳಲ್ಲಿ ಸೇವೆ ಮಾಡಲು ಅವಕಾಶ ಸಿಗಲಿದೆ. ಗರಿಷ್ಠ 45 ಸಾವಿರ ಯುವಜನರನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಈ ಯೋಜನೆಯು ಉದ್ಯೋಗಾವಕಾಶ ನೀಡುವುದರ ಜತೆಗೆ ದೇಶದ ರಕ್ಷಣಾ ಸೇವೆ ಮಾಡಬೇಕೆಂಬ ಯುವಜನರ ಆಸೆಯನ್ನೂ ಈಡೇರಿಸ ಲಿದೆ. ರಕ್ಷಣಾ ಇಲಾಖೆಗೆ ನಿಯೋಜಿಸುವ ವಾರ್ಷಿಕ ಬಜೆಟ್‌ನ ಅರ್ಧದಷ್ಟು ಹಣ ಪಿಂಚಣಿ ಮತ್ತು ವೇತನ ನೀಡಲು ವ್ಯಯವಾಗುತ್ತಿದೆ. ಅಗ್ನಿಪಥ್ ಯೋಜನೆಯಡಿ ಸೇವೆ ಸಲ್ಲಿಸಿದ ವರಿಗೆ ಪಿಂಚಣಿ ಸೌಲಭ್ಯ ಇರುವು ದಿಲ್ಲವಾದ್ದರಿಂದ ಇಲಾಖೆ ಮೇಲಿನ ಆರ್ಥಿಕ ಭಾರ ಕಡಿಮೆಯಾಗಲಿದೆ.

ಹೀಗೆ ಉಳಿಯುವ ಹಣವನ್ನು ಮೂರೂ ಸೇನೆಗಳ ಆಧುನೀಕರಣಕ್ಕೆ ವ್ಯಯಿಸಿ ಸೇನೆಗಳ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ. ಸೈನಿಕರ ಸಂಬಳ ಮತ್ತು ಪಿಂಚಣಿಯಿಂದಾಗಿ ಸರಕಾರದ ಮೇಲೆ ಬಿದ್ದಿರುವ ಹೊರೆ ಕಡಿಮೆ ಮಾಡಿಕೊಳ್ಳುವುದು ಹಾಗೂ ಸಶಸ್ತ್ರ ಪಡೆಗಳು ಹೆಚ್ಚು ತಾರುಣ್ಯಯುತವಾಗಿ ಇರುವಂತೆ ನೋಡಿಕೊಂಡಂತಾಗುತ್ತದೆ. ಅಲ್ಲದೆ, ಯುವಕರಿಗೆ ಸೈನ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ ಎಂದಾಗ ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕೆಂಬ ಆಸೆಯೂ ಹುಟ್ಟುತ್ತದೆ.

ಇದರಿಂದ ಲಕ್ಷಾಂತರ ಯುವಕರು ದುಶ್ಟಟಗಳಿಂದ ಮುಕ್ತವಾಗಲು ಮನಸ್ಸು ಮಾಡಬಹುದು ಎಂಬ ಆಶಾಭಾವನೆಯೂ ಇದೆ. ಅಲ್ಲದೆ, ನಿವೃತ್ತಿ ನಂತರ ಬಂದ ದುಡ್ಡಿನಲ್ಲಿ ಸ್ವಯಂ ಉದ್ಯೋಗ ಮಾಡುವ ಅವಕಾಶವಿರುವುದರಿಂದ ಮತ್ತಷ್ಟು ಉದ್ಯೋಗ ಸೃಷ್ಟಿಯೂ ಆಗುವ ಸಾಧ್ಯತೆ ಇದೆ. ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷಗಳ ನಂತರವಾದರೂ ನಿರುದ್ಯೋಗ ನಿವಾರಣೆಗೆ ಅದ್ಭುತ ಯೋಜನೆಯೊಂದನ್ನು ರೂಪಿಸಿದ್ದಾರೆ.