ಉನ್ನತ ಶಿಕ್ಷಣಕ್ಕೆ ಸೇರುವವರ ದಾಖಲು ಪ್ರಮಾಣವನ್ನು ಹೆಚ್ಚಿಸಲು ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಸ್ಥಾಪಿಸಲು ಸರಕಾರ ನಿರ್ಧರಿಸಿದೆ. ಇನ್ನೊಂದೆಡೆ ಅಣಬೆಗಳಂತೆ ಖಾಸಗಿ ವಿಶ್ವವಿದ್ಯಾಲಯಗಳು ಹುಟ್ಟಿಕೊಳ್ಳುತ್ತಿವೆ.
ಇಷ್ಟಾದರೂ ಸರಕಾರಿ ವಿಶ್ವವಿದ್ಯಾಲಯಗಳು ಇಲ್ಲದಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಲಿನ ಶಾಸಕರು ಹೊಸ ವಿಶ್ವವಿದ್ಯಾ ಲಯಗಳ ಸ್ಥಾಪನೆಗೆ ಒತ್ತಡ ಹೇರುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ವಿಶ್ವವಿದ್ಯಾಲಯಗಳು ಆರಂಭ ದಿಂದಲೂ ಮೂಲಸೌಕರ್ಯ ಕೊರತೆ, ಹಣಕಾಸಿನ ಪರಿಸ್ಥಿತಿ ನಿಭಾಯಿಸುವಲ್ಲಿ ಹೆಣಗಾಡುತ್ತಿವೆ. ಬಹುತೇಕ ವಿಶ್ವವಿದ್ಯಾಲಯ ಗಳು ಕಾಯಂ ಅಧ್ಯಾಪಕರ ಕೊರತೆಯಿಂದ ರೋಸಿಹೋಗಿವೆ. ಅಧ್ಯಾಪಕ, ವಿದ್ಯಾರ್ಥಿಸಮೂಹದ ಪರಿಸ್ಥಿತಿ ನಿಸ್ಸಹಾಯಕತೆ ಶೈಕ್ಷಣಿಕ ಪರಿಸ್ಥಿತಿಯನ್ನು ಎತ್ತಿತೋರಿಸುವಂತಿದೆ.
ಈ ನಡುವೆಯೇ ಕ್ಷೇತ್ರಕ್ಕೊಂದು ವಿವಿ ಸ್ಥಾಪನೆಗೆ ಬೇಡಿಕೆ ಇಡುತ್ತಿರುವುದು ಮೂರ್ಖತನದ ಪರಮಾವಧಿ. ಈಗಾಗಲೇ ಸ್ಥಾಪನೆ ಯಾಗಿರುವ ವಿಶ್ವವಿದ್ಯಾಲಯಗಳು ಹಣಕಾಸಿನ ಕೊರತೆಯಿಂದ ಮಾತ್ರವಲ್ಲ ಬೌದ್ಧಿಕ ದಾರಿದ್ರ್ಯದಿಂದಲೂ ಸೊರಗುತ್ತಿವೆ. ಅವುಗಳನ್ನು ಕಾಡುತ್ತಿರುವುದು ಬರೀ ಮಾನವ ಸಂಪನ್ಮೂಲ ಅಥವಾ ಹಣಕಾಸಿನ ಸಂಪನ್ಮೂಲವಲ್ಲ. ವಿಶ್ವವಿದ್ಯಾಲಯಗಳ ಮಹತ್ತರ ಉದ್ದೇಶವಾದ ಸಂಶೋಧನೆ ಹಾಗೂ ಶೈಕ್ಷಣಿಕ ಆವಿಷ್ಕಾರಗಳು ನನೆಗುದಿಗೆ ಬಿದ್ದಿವೆ. ಎಲ್ಲದಕ್ಕೂ ಸರಕಾರ ನೀಡುವ ಅನುದಾನವನ್ನೇ ಅವಲಂಬಿಸಿರುವ ವಿವಿಗಳಿಗೆ ಸರಕಾರ ನಗಣ್ಯ ಎನ್ನುವಷ್ಟು ಕನಿಷ್ಠ ಅನುದಾನ ನೀಡುತ್ತಿದೆ.
‘ನಮಗೆ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ’ ಎಂಬ ಗೊಣಗಾಟದಲ್ಲಿ ವಿವಿಗಳ ಕುಲಪತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ವಿವಿಗಳಿಗೆ ಸರಕಾರ ವಾರ್ಷಿಕ ಕನಿಷ್ಠ ೫೦ ಲಕ್ಷ ರು. ಅನುದಾನವನ್ನೂ ನೀಡಿಲ್ಲ. ಆಸ್ತಿಗಳ ಸೃಜನೆಗೆ ಸಹಾಯ ಧನವೆಂದು ರಾಜ್ಯ ಸರಕಾರ ಕೆಲ ವಿವಿಗಳಿಗೆ ಕೇವಲ ೩೮ ಲಕ್ಷ ರು. ಅನುದಾನ ನೀಡಿದೆ. ಆರು ವಿವಿಗಳಿಗೆ ತಲಾ ಒಂದು ಕೋಟಿ ರು. ಅನುದಾನ ನೀಡಿದೆ. ಇನ್ನು ಕೆಲ ವಿವಿಗಳಿಗೆ ೨ ಕೋಟಿ ರು. ಮಾತ್ರ ಹಣ ಘೋಷಿಸಿದ್ದರೂ ಆರ್ಧದಷ್ಟು ಬಿಡುಗಡೆ ಆಗಿಲ್ಲ.
ಹೊಸ ವಿವಿಗಳಲ್ಲಿ ಅಗತ್ಯ ಕಟ್ಟಡಗಳಿಲ್ಲ, ಮೂಲಭೂತ ಸೌಲಭ್ಯಗಳೇ ಇಲ್ಲ. ನಿತ್ಯದ ಕೆಲವು ಖರ್ಚುಗಳಿಗೆ ಪರೀಕ್ಷಾ ಶುಲ್ಕದಂಥ ಆದಾಯವನ್ನೇ ಅವಲಂಬಿಸುವ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲೇ ಸರಕಾರ ಗೊತ್ತುಗುರಿಯಿಲ್ಲದಂತೆ ವಿಶ್ವವಿದ್ಯಾ ಲಯಗಳನ್ನು ಸ್ಥಾಪಿಸುವದನ್ನು ಬಿಟ್ಟು, ಈಗಾಗಲೇ ಇರುವ ವಿವಿಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸಬೇಕಿದೆ.
Read E-Paper click here