ಏಕ ಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿ ಆರು ತಿಂಗಳು ಕಳೆದಿವೆ. ಹಾಗಿದ್ದರೂ, ಬೆಂಗಳೂರು ನಗರ ಸೇರಿದಂತೆ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ.
ಎಲ್ಲ ಕಡೆಗಳಲ್ಲೂ ರಾಜಾರೋಷವಾಗಿ ಏಕ ಬಳಕೆಯ ಪ್ಲಾಸ್ಟಿಕ್ ಲಭ್ಯವಿದೆ. ಸ್ಥಳೀಯ ಆಡಳಿತಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಾಗ ಕಾರ್ಯಾ ಚರಣೆ ನಡೆಸಿ ವ್ಯಾಪಾರಿಗಳಿಗೆ ದಂಡ ವಿಧಿಸುತ್ತಿರುವುದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ನಿಷೇಧಿತ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡ ಒಂದು ಉದಾಹರಣೆಯೂ ಇಲ್ಲ.
ಪರಿಣಾಮವಾಗಿ ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್‌ನ ನಿರ್ವಹಣೆ ಸ್ಥಳೀಯ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚೇ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಭೂತವಾಗಿ ಕಾಡುವುದು ಖಚಿತ. ಪೌರಕಾರ್ಮಿಕರು ಮನೆ ಮನೆಗೆ ಹೋಗಿ, ಮಳಿಗೆಗಳಿಗೆ ಹೋಗಿ ಕಸವನ್ನು ಸಂಗ್ರಹಿಸುತ್ತಾರೆ. ಹಾಗಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕಸವನ್ನು ಎಸೆಯುವವರ ಸಂಖ್ಯೆ ಬಹಳಷ್ಟಿದ್ದಾರೆ.
ಪ್ಲಾಸ್ಟಿಕ್ ಕಸವನ್ನು ರಾಶಿ ಹಾಕಿ ಸುಡುವವರೂ ಇದ್ದಾರೆ. ಖಾಲಿ ಸೈಟುಗಳು ತಿಪ್ಪೆಯ ಗುಡ್ಡೆಗಳಾಗಿ ಪರಿವರ್ತನೆಯಾಗಿವೆ. ಕಸ ಸಂಗ್ರಹಿಸುವ ಪೌರಕಾರ್ಮಿಕರು ಕಸದಲ್ಲಿ ಗುಜರಿಗೆ ಮಾರಬಹುದಾದ ಕಸವನ್ನು ಅವರೇ ಮಾರಾಟ ಮಾಡುತ್ತಾರೆ. ಹಾಗಾಗಿ, ಪೂರ್ಣ ಪ್ರಮಾಣದ ಪ್ಲಾಸ್ಟಿಕ್ ಪಾಲಿಕೆಯ ಕಸ ಸಂಗ್ರಹ ಘಟಕದಲ್ಲಿ ತಲುಪುತ್ತಿಲ್ಲ. ಹೀಗಾಗಿ ಘಟಕದಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್‌ಗಳು ಮರುಬಳಕೆಗೂ ಸಾಧ್ಯವಾಗದದಂತಾಗಿದೆ. ಜನರು ಸ್ವತಃ ಜಾಗೃತರಾಗದೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಸಾಧ್ಯವೇ ಇಲ್ಲ. ಪ್ಲಾಸ್ಟಿಕ್ ಅನ್ನು ಬಳದಿರುವ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಮಾಡಬೇಕು. ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ಹಾಕುವುದನ್ನು ಬಿಡಬೇಕು.
ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಬೇಕು.