Sunday, 15th December 2024

ಲಸಿಕೆ ಹಾಕಿಕೊಳ್ಳಲು ಉದಾಸೀನ ಏಕೆ?

#Vaccine

ಕೋವಿಡ್-19 ಲಸಿಕೆ ಪಡೆಯಲು ಅರ್ಹರಾಗಿರುವ ಭಾರತದ ವಯಸ್ಕರ ಪೈಕಿ ಶೇ.೮೦ರಷ್ಟು ಜನರು ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ, ಶೇ.38ರಷ್ಟು ಜನರು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆಯ ಮೊದಲ ಡೋಸ್ ಪಡೆದುಕೊಂಡ 12 ಕೋಟಿಗೂ ಹೆಚ್ಚು ಜನರು ನಿಗದಿತ ಅವಧಿಯ ಒಳಗೆ ಎರಡನೇ ಡೋಸ್ ಹಾಕಿಸಿಕೊಂಡಿಲ್ಲ ಎಂದು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

12 ಕೋಟಿ ಜನರು ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿಲ್ಲ ಎಂದರೆ ಕೋವಿಡ್‌ನ ಅಪಾಯ ನಮ್ಮಿಂದ ದೂರ ಹೋಗಿಲ್ಲ ಎಂದೇ ಅರ್ಥ. ಏಕೆಂದರೆ, ಅನೇಕ ರಾಷ್ಟ್ರಗಳಲ್ಲಿ ಕೋವಿಡ್ ಸಾಂಕ್ರಾಮಿಕವು ಇನ್ನೂ ಮರೆ ಯಾಗಿಲ್ಲ. ಆಸ್ಟ್ರಿಯಾ, ನೆದರ್‌ಲ್ಯಾಂಡ್ಸ್ ದೇಶಗಳಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದ ಮತ್ತೆ ಭಾಗಶಃ ಲಾಕ್ ಡೌನ್ ನಿರ್ಧಾರಕ್ಕೆ ಬಂದಿವೆ. ಹೀಗಿರುವಾಗ ಜನಸಂಖ್ಯೆ ಮತ್ತು ಜನಸಾಂದ್ರತೆ ಹೆಚ್ಚಾಗಿರುವ ಭಾರತದಲ್ಲಿ ಮತ್ತೊಂದು ಅನಾಹುತ ಸೃಷ್ಟಿಸಲು ಜನರು ಅವಕಾಶ ಕೊಡಬಾರದು. ಪ್ರತಿದಿನ ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆಯು ಇಳಿಕೆಯಾಗಿದೆ ಎಂಬ ಕಾರಣಕ್ಕೆ ಜನರು ಅಸಡ್ಡೆ ತೋರಿ ದಂತಿದೆ.

ಪ್ರಕರಣಗಳೇನೋ ಕಡಿಮೆಯಾಗಿವೆ, ಆದರೆ ಸಂಪೂರ್ಣ ಕೋವಿಡ್‌ಮುಕ್ತ ಭಾರತ ಘೋಷಣೆಯಾಗಿಲ್ಲ ಎಂಬು ದನ್ನು ಅರಿತುಕೊಳ್ಳಬೇಕಿದೆ. ಸರಕಾರವೂ ನಿರ್ಲಕ್ಷ್ಯ ತೋರದೆ ‘ಎರಡನೇ ಡೋಸ್ ಅನ್ನು ನಿಗದಿತ ಅಂತರದಲ್ಲಿ ಹಾಕಿಸಿಕೊಂಡರೆ ಮಾತ್ರ ಕೋವಿಡ್‌ನಿಂದ ರಕ್ಷಣೆ ಸಿಗುತ್ತದೆ’ ಎಂಬ ವಿಚಾರವನ್ನು ಜನರಿಗೆ ಮನ ದಟ್ಟು ಮಾಡ ಬೇಕು. ಕೆಲವು ದೇಶಗಳಲ್ಲಿ ಜನರಿಗೆ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ಹಾಕಿಸುವ ಬಗ್ಗೆ ಚಿಂತನೆ ಗಳು ನಡೆದಿವೆ. ಹಾಗಿರುವಾಗ ಎರಡನೇ ಡೋಸ್ ವಿಚಾರದಲ್ಲಿಯೇ ನಾವು ಎಡವಿದರೆ ಹೇಗೆ? ಕೋವಿಡ್ ಎರಡನೇ ಅಲೆಯಲ್ಲಿ ಅನುಭವಿಸಿದ ಕಷ್ಟ-ನಷ್ಟ, ಸಾವು-ನೋವುಗಳನ್ನು ಇಷ್ಟು ಬೇಗೆ ಮರೆತರೆ ಹೇಗೆ? ಮೊದಲ ಡೋಸ್ ಹಾಕಿಸಿಕೊಂಡ ಜನರು ಎರಡನೇ ಡೋಸ್ ಪಡೆಯುವ ವಿಚಾರದಲ್ಲಿ ಉದಾಸೀನ ತೋರುವುದನ್ನು ಬಿಟ್ಟು, ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡು ದೇಶವನ್ನು ಕೋವಿಡ್‌ಮುಕ್ತ ಮಾಡುವ ಮೂಲಕ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸ ಬೇಕಿದೆ.

ಕರೋನಾ ಸೋಂಕು ನಿರ್ಮೂಲನೆಯಲ್ಲಿ ಸರಕಾರ ಮತ್ತು ಜನರು ಹೆಚ್ಚು ಜವಾಬ್ದಾರಿಯಿಂದ ವರ್ತಿಸುವುದು ಜಗತ್ತಿನ ಒಳಿತಿನ ದೃಷ್ಟಿಯಿಂದ ಮಹತ್ವದ್ದಾಗಿದೆ. ಲಸಿಕೆ ಹಾಕಿಸುವ ವಿಚಾರದಲ್ಲಿನ ನಿರ್ಲಕ್ಷ್ಯಕ್ಕೆ ಮತ್ತೊಮ್ಮೆ ಭಾರಿ ಬೆಲೆ ತೆರಬೇಕಾದೀತು ಎಂಬ ಎಚ್ಚರ ಆಡಳಿತ ನಡೆಸುವವರು ಮತ್ತು ಜನರಲ್ಲಿ ಇರಬೇಕು.