Saturday, 14th December 2024

ಮನೆ ಮನೆಗೆ ಲಸಿಕೆ ಅಭಿಯಾನಕ್ಕೆ ಪೂರಕ

ಪ್ರಸ್ತುತ ಸಂದರ್ಭದಲ್ಲಿ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಮತ್ತೊಂದು ಬೇಡಿಕೆ ಎಂದರೆ ಮನೆ-ಮನೆಗೆ ಲಸಿಕೆ ನೀಡುವ ಪ್ರಕ್ರಿಯೆ. ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ  ನಗರಗಳಲ್ಲಿ ಮನೆ – ಮನೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸುವುದರಿಂದ ಅಭಿಯಾನ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲು ಸಾಧ್ಯ ಎಂಬುದು.

ಇದೊಂದು ಉತ್ತಮ ಆಲೋಚನೆಯಾಗಿದ್ದು, ಇದರಿಂದ ಲಸಿಕೆಗಾಗಿ ಜನರು ಗುಂಪು ಸೇರುವುದನ್ನು ಸಹ ತಡೆಗಟ್ಟಲು ಸಾಧ್ಯವಿದೆ. ಅನುಷ್ಠಾನದ ವಿಚಾರದಲ್ಲಿ ಸರಕಾರದಿಂದ ಪ್ರಯತ್ನಗಳು ಆರಂಭವಾಗಬೇಕಿರುವುದು ಇಂದಿನ ಅಗತ್ಯ. ಲಸಿಕೆ ಅಭಿಯಾನದ ಆರಂಭದಲ್ಲಿ ಕೇಳಿಬಂದ ಅಪಪ್ರಚಾರದಿಂದಾಗಿ ಲಸಿಕೆ ಬಗ್ಗೆ ಜನರಿಗಿದ್ದ ನಿರ್ಲಕ್ಷ್ಯ ಮನೋಭಾವನೆ ದೂರವಾಗಿದೆ. ಜನತೆ ಲಸಿಕೆ ಪಡೆಯಲು ಉತ್ಸುಕವಾಗಿರುವಂತೆಯೇ ಲಸಿಕೆ ನೀಡುವಲ್ಲಿ ದೇಶವು ಯಶಸ್ವಿಗೊಂಡಿದ್ದು ಅನೇಕ ರಾಷ್ಟ್ರಗಳಿಗಿಂತಲೂ ಮುನ್ನಡೆ ಸಾಧಿಸಿದೆ. ಆದರೆ ರಾಜ್ಯದಲ್ಲಿನ ಪರಿಸ್ಥಿತಿ ಯಾವನಿಟ್ಟಿನಲ್ಲಿ ಸಾಗುತ್ತಿದೆ ಎಂಬುದು ಹಾಗೂ ಉಳಿದ ರಾಜ್ಯಗಳಿಗಿಂತಲೂ ಮುನ್ನಡೆ ಸಾಽಸಲು ಜಾರಿಗೊಳಿಸಬೇಕಿರುವ ಕ್ರಮಗಳ ಬಗ್ಗೆ ಚರ್ಚೆಗಳು ಏರ್ಪಟ್ಟಿವೆ.

ಭಾರತದಲ್ಲಿ ಅತಿಹೆಚ್ಚು ಲಸಿಕೆಗಳನ್ನು ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ದೇಶದ ಪಟ್ಟಿಯಲ್ಲಿ ರಾಜ್ಯ ಮೊದಲ ಸ್ಥಾನ ತಲುಪಲು ಆಗಬೇಕಿರುವ ಕ್ರಮಗಳೇನು ಎಂಬುದು ಅವಲೋಕಿಸಬೇಕಿರುವ ಸಂಗತಿ. ೧೮ ವರ್ಷಕ್ಕಿಂತ
ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಅಭಿಯಾನ ಕೈಗೊಂಡಿರುವುದು ಅಭಿಯಾನಕ್ಕೆ ಪೂರಕವಾದ ಮಹತ್ವದ ಬೆಳವಣಿಗೆ.