Sunday, 15th December 2024

ಮೊಯ್ಲಿಯ ಹಳದಿ ಕನ್ನಡಕ

‘ಎಳನೀರು ಮಾತ್ರ ಕುಡಿದು ಉಪವಾಸ ಮಾಡಿದರೆ ಒಂದೆರಡು ದಿನದಲ್ಲೇ ಮನುಷ್ಯ ಬೀಳುತ್ತಾನೆ; ೧೧ ದಿನಗಳ ಉಪವಾಸ ಮಾಡಿದರೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಮೋದಿ ಉಪವಾಸ ಮಾಡಿಲ್ಲ’ ಎನ್ನುವ ಮೂಲಕ ಹಿರಿಯ ಕಾಂಗ್ರೆಸಿಗ ವೀರಪ್ಪ ಮೊಯ್ಲಿ, ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಿಮಿತ್ತವಾಗಿ ಪ್ರಧಾನಿ ಮೋದಿಯವರು ಕೈಗೊಂಡಿದ್ದ ಉಪವಾಸ ವ್ರತದ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಗ್ಯಕರ ಟೀಕೆಗೆ, ಶಂಕೆಗೆ ನಮ್ಮ ಸಮಾಜದಲ್ಲಿ ಅವಕಾಶವಿದೆ; ಆದರೆ ಇಂಥ ‘ರಾಜಕೀಯ ಲೇಪಿತ’ ಶಂಕೆ ಅಥವಾ ಟೀಕೆಗೆ ಏನನ್ನುವುದು?! ಅಷ್ಟಕ್ಕೂ, ಒಬ್ಬ ವ್ಯಕ್ತಿ ಕೇವಲ ನೀರು ಕುಡಿದೋ, ಎಳನೀರು ಕುಡಿದೋ, ಬರೀ ಗಾಳಿ ಸೇವಿಸಿಯೋ ಉಪವಾಸ ಇರಬಲ್ಲನೇ ಅಥವಾ ಅದು ಸಾಧ್ಯವಿಲ್ಲವೇ ಎಂಬುದು ಆಯಾ ವ್ಯಕ್ತಿಯ ದೈಹಿಕ ಕ್ಷಮತೆ ಮತ್ತು ಮಾನಸಿಕ ಸಂಕಲ್ಪಕ್ಕೆ ಸಂಬಂಧಿಸಿದ ವಿಷಯ. ಜತೆಗೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಸಾಧ್ಯತೆಯೂ ಹೌದು.

ಯಾವುದೋ ಮಾನದಂಡವನ್ನಿಟ್ಟುಕೊಂಡು ವ್ಯಕ್ತಿಯೊಬ್ಬನ ‘ಉಪವಾಸದ ಸಾಮರ್ಥ್ಯ’ವನ್ನು ಅಳೆಯಲಾಗದು ಎಂಬುದು ಸಾಮಾನ್ಯ ಜ್ಞಾನ. ಹೀಗಿರುವಾಗ, ಇಂಥ ಅರ್ಥವಿಲ್ಲದ ಅನುಮಾನ ವ್ಯಕ್ತಪಡಿಸಿದರೆ ಅಥವಾ ರಾಜಕೀಯ ಎದುರಾಳಿ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ‘ಹಳದಿ ಕನ್ನಡಕ’ದಿಂದ ನೋಡಿದರೆ ಅದಕ್ಕೇನನ್ನುವುದು?! ಹೇಳಿ-ಕೇಳಿ ಇದು ಚುನಾವಣಾಪರ್ವ; ಶತಾಯಗತಾಯ ಎದುರಾಳಿಯನ್ನು ಮಣ್ಣುಮುಕ್ಕಿಸಲು ರಾಜಕೀಯ ಪುಢಾರಿಗಳು ಬೆವರು ಹರಿಸುವುದು ಈ ಘಟ್ಟದಲ್ಲಿ ಸಹಜ. ಆದರೆ ಅಂಥ ಕಸರತ್ತುಗಳು, ಟೀಕಾಪ್ರಹಾರಗಳು ಸ್ವೀಕಾರಾರ್ಹವೂ ಆರೋಗ್ಯ ಕರವೂ ಆಗಿರಬೇಕಲ್ಲವೇ? ‘ಟೀಕೆಗಾಗಿ ಟೀಕೆ’ ಎಂಬ ಒಂದೇ ಕಾರಣಕ್ಕೆ ಬಾಯಿಗೆ ಬಂದಿದ್ದನ್ನೆಲ್ಲಾ ಹೇಳಿಕೊಂಡು ಹೋದರೆ ಅದು ವ್ಯರ್ಥಪ್ರಲಾಪ ವಾಗುವುದೇ ವಿನಾ, ಅದಕ್ಕೊಂದು ಅರ್ಥವಾಗಲೀ ತೂಕವಾಗಲೀ ಪ್ರಸ್ತುತತೆಯಾಗಲೀ ದಕ್ಕುವುದಿಲ್ಲ. ಕೆಲ ‘ಸಾಂದರ್ಭಿಕ’ ಟೀಕಾಕಾರರಿಗೆ ಈ ಸೂಕ್ಷ್ಮ ಅರ್ಥವಾಗದಿರುವುದು ವಿಷಾದನೀಯ!