Sunday, 1st December 2024

ಮಹಿಳೆಯರ ಸಾಧನೆ ಭಾರತಕ್ಕೆ ಹೆಮ್ಮೆಯ ಸಂಗತಿ

ಭಾರತದ ತಾರಾ ಕುಸ್ತಿಪಟು ಎಂದು ಗುರುತಿಸಲಾಗುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್. ಈಕೆ ಶುಕ್ರವಾರದಂದು
ಪೋಲೆಂಡ್ ದೇಶದ ರಾಜಧಾನಿ ವಾರ್ಸಾದಲ್ಲಿ ನಡೆದ ‘ಪೋಲೆಂಡ್ ಕುಸ್ತಿಪಂದ್ಯಾವಳಿಯ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದು ದೇಶಕ್ಕೆ ಗೌರವ ತಂದಿದ್ದಾರೆ. ಕ್ರೀಡೆ ಮಾತ್ರವಲ್ಲದೆ ಎಲ್ಲ ಕ್ಷೇತ್ರದಲ್ಲಿಯೂ ಭಾರತೀಯ ಹಾಗೂ ಭಾರತೀಯ ಮೂಲದ ಮಹಿಳೆಯರ ಸಾಧನೆ ಗಮನಾರ್ಹವಾಗಿದೆ.

ಭಾರತದಲ್ಲಿ ಹೆಣ್ಣನ್ನು ಗೌರವ ಮನೋಭಾವದಿಂದ ಕಾಣುವುದರಿಂದ ಈ ದೇಶವನ್ನು ಸೀ ಪ್ರಧಾನ ದೇಶ ಎಂದು ಕರೆಯ ಲಾಗುತ್ತದೆ. ಇಂಥ ಮಾತನ್ನು ಭಾರತದ ಮಹಿಳೆಯರು ಸಾಧನೆ ಮೂಲಕ ಪದೇ ಪದೆ ಸಾಬೀತುಪಡಿಸುತ್ತಲೇ ಸಾಗುತ್ತಿದ್ದಾರೆ. ಇಲ್ಲಿ ವಾಸಿಸುತ್ತಿರುವವರು ಮಾತ್ರವಲ್ಲದೆ, ಭಾರತದ ನೆಲದ ಗುಣವನ್ನು ಹೊಂದಿರುವ ಭಾರತೀಯ ಮೂಲದವರೂ ತಮ್ಮ ಸಾಧನೆ ಗಳ ಮೂಲಕ ಭಾರತದ ನುಡಿಗಟ್ಟನ್ನು ವಾಸ್ತವವನ್ನಾಗಿಸುತ್ತಿದ್ದಾರೆ.

ಇತ್ತೀಚೆಗೆ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೇರುವ ಮೂಲಕ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದಂಥ ಬಲಿಷ್ಠ ರಾಷ್ಟ್ರದಲ್ಲಿಯೂ ತಮ್ಮ ಸಾಮರ್ಥ್ಯದ ಮೂಲಕ ಸಾಧನೆ ತೋರಿದ್ದರು. ಇದೀಗ ಚೀನಾದಂಥ ಅಪಾಯಕಾರಿ ರಾಷ್ಟ್ರದ ಕ್ರೌರ್ಯ ವನ್ನು ವರದಿಗಳ ಮೂಲಕ ಬಹಿರಂಗಪಡಿಸಿದ ಅಮೆರಿಕ ಪತ್ರಕರ್ತೆ ಮೇಘಾ ರಾಜಗೋಪಾಲನ್ ಭಾರತೀಯ ಮೂಲದವರು ಎಂಬುದು ಮತ್ತೊಂದು ಹೆಮ್ಮೆಯ ಸಂಗತಿ.

ಚೀನಾದಂಥ ಉಕ್ಕಿನ ಕೋಟೆಯನ್ನು ಭೇದಿಸಿದ ಇಂಥ ದಿಟ್ಟ ಪತ್ರಕರ್ತೆಗೆ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದು ಭಾರತದ ಪಾಲಿಗೂ ಸಂತಸ ಸಂಗತಿ. ಭಾರತೀಯ ಮೂಲದವರು ಮಾತ್ರವಲ್ಲ, ದೇಶದಲ್ಲಿನ ಮಹಿಳೆಯರ ಸಾಧನೆಯೂ ಸಾಮಾನ್ಯವಲ್ಲ. ಕ್ರೀಡೆ, ರಾಜಕೀಯ, ಸೇನೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರ ಸಾಧನೆ ಹೆಚ್ಚುತ್ತಿರುವುದು ಮಹತ್ವದ
ಬೆಳವಣಿಗೆಯಾಗಿದ್ದು, ಭಾರತದ ಪಾಲಿಗೆ ಹೆಮ್ಮೆಯ ಸಂಗತಿ.