ಒಬ್ಬ ವ್ಯಕ್ತಿ, ಒಂದು ಸಮಾಜ ಅಥವಾ ಒಂದು ರಾಷ್ಟ್ರ ತನ್ನ ಹಲವು ಹನ್ನೊಂದು ಕಾರ್ಯಚಟುವಟಿಕೆಗಳು ಅಥವಾ ಲೌಕಿಕ ವ್ಯವಹಾರಗಳ ಫಲಶ್ರುತಿಯಾಗಿ ಕಾಣಬಯಸುವುದು ಸಮಾಧಾನ-ಸಂತೃಪ್ತಿ, ಶಾಂತಿ- ನೆಮ್ಮದಿಗಳನ್ನು. ಆದರೆ, ‘ಸಮಷ್ಟಿಯ ಹಿತ’ಕ್ಕಿಂತ ‘ವ್ಯಷ್ಟಿಹಿತ’ಕ್ಕೇ ಒತ್ತುಕೊಡುವವರು ದಿನೇದಿನೆ ಹೆಚ್ಚುತ್ತಿರುವ ಕಾರಣದಿಂದಾಗಿ, ಈ ಸಮಾಧಾನ-ಸಂತೃಪ್ತಿ, ಶಾಂತಿ-ನೆಮ್ಮದಿಗಳಿಗೆ ಕೊಳ್ಳಿಯಿಡುವ ಪರಿಪಾಠವೂ ತಾರಕಕ್ಕೇರುತ್ತಿದೆ.
ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯಾದರೂ ಪರವಾಗಿಲ್ಲ ಎಂಬ ಧೋರಣೆಯಲ್ಲಿ ಕಾಲುಕೆರೆದುಕೊಂಡು ಭಾರತದ ಮೇಲೆ ವಾಗ್ದಾಳಿಗೆ ನಿಂತಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ತೀರದ ರಕ್ತದಾಹದ ದ್ಯೋತಕವಾಗಿ ಕಾಣಿಸುತ್ತಿ
ರುವ ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಹಮಾಸ್ ಸಂಘರ್ಷಗಳು ಇದಕ್ಕೆ ಒಂದೆರಡು ನಿದರ್ಶನಗಳು. ಇನ್ನು, ನಮ್ಮ ನೆಲದಲ್ಲೇ ನೋಡುವುದಾದರೆ, ಏರ್ ಇಂಡಿಯಾದ ಒಂದು ವಿಮಾನ ಹಾಗೂ ಇಂಡಿಗೋ ಸಂಸ್ಥೆಯ ಎರಡು
ವಿಮಾನಗಳಿಗೆ ಒಂದೇ ದಿನ ಬಾಂಬ್ ಬೆದರಿಕೆ ಬಂದಿದೆ; ರೈಲನ್ನು ಹಳಿ ತಪ್ಪಿಸಿ ಭಾರಿ ಪ್ರಮಾಣದಲ್ಲಿ ಅಪಘಾತ ಟುಮಾಡಿ ಜನರ ಸಾವು-ನೋವುಗಳನ್ನು ಸಂಭ್ರಮಿಸುವ ‘ಹಿಂಸಾವಿನೋದಿ’ಗಳ ರಣಕೇಕೆಯೂ ನಿಲ್ಲುತ್ತಿಲ್ಲ;
ಉತ್ತರಪ್ರದೇಶದ ಗ್ರಾಮವೊಂದರಲ್ಲಿ ದಸರೆಯ ಸಮಾರೋಪ ಸಮಾರಂಭದ ಅಂಗವಾಗಿ ದುರ್ಗಾಮಾತೆಯ ವಿಗ್ರಹದ ವಿಸರ್ಜನೆಗೂ ಮುನ್ನಿನ ಮೆರವಣಿಗೆಯ ವೇಳೆ ಯುವಕನೊಬ್ಬನ ಹತ್ಯೆಯಾಗಿದೆ.
‘ವ್ಯಷ್ಟಿ’ ನೆಲೆಯ ಸ್ವಾರ್ಥವು ‘ಸಮಷ್ಟಿಯ ಹಿತ’ವನ್ನೇ ಆಪೋಶನ ತೆಗೆದುಕೊಳ್ಳುವ ಪರಿಯ ಇಂಥ ಘಟನೆಗಳು ಯಾವುದೇ ಸಮಾಜಕ್ಕೆ ಅಪಥ್ಯವಾಗಬೇಕು. ಸಣ್ಣದೊಂದು ಬೆಂಕಿಯ ಕಿಡಿಯನ್ನು ನಿರ್ಲಕ್ಷಿಸಿದರೆ ಅದು ಒಂದಿಡೀ ಮನೆಯನ್ನೇ ಸುಟ್ಟು ಭಸ್ಮಮಾಡುತ್ತದೆ ಎಂಬ ಅಪ್ರಿಯ ಸತ್ಯವನ್ನು ನಾವ್ಯಾರೂ ಮರೆಯಬಾರದು. ‘ಒಲೆ ಹೊತ್ತಿ ಉರಿಯುವುದು’ ಜೀವಪೋಷಣೆಯ ದ್ಯೋತಕ, ಆದರೆ ‘ಧರೆ ಹೊತ್ತಿ ಉರಿಯುವುದು’ ಜೀವನಾಶದ ಸೂಚಕ. ಪ್ರಪಂಚದ ಯಾವೊಂದು ದೇಶವೂ ಯುದ್ಧವನ್ನಾಗಲೀ, ಸಂಘರ್ಷವನ್ನಾಗಲೀ, ಹಿಂಸಾಚಾರ-ರಕ್ತ ದೋಕುಳಿ ಗಳನ್ನಾಗಲೀ ಜೀರ್ಣಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ.
ಈ ಕಹಿಸತ್ಯದ ಅರಿವಿದ್ದೂ ಕೆಲವೊಂದು ‘ಬಲಿಷ್ಠ’ ದೇಶಗಳ ನಾಯಕರು ಯುದ್ಧೋನ್ಮಾದದ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ‘ಒಲೆ ಹೊತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದಡೆ ನಿಲಲಾಗದು’ ಎಂದು ಇವರಿಗೆ ಬುದ್ಧಿ ಹೇಳೋರ‍್ಯಾರು?
ಇದನ್ನೂ ಓದಿ: Vishwavani Editorial: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣವೇ?