ಇದು ನಿಜಕ್ಕೂ ಆಘಾತಕಾರಿ ಸಂಗತಿ. ಮೋರಿಸ್ ಸ್ಯಾಮ್ಯುಯೆಲ್ ಎಂಬಾತ ಗುಜರಾತಿನ ಗಾಂಧಿನಗರದಲ್ಲಿನ ತನ್ನ ಕಚೇರಿಯಲ್ಲಿ ನ್ಯಾಯಾಲಯದ ಸಜ್ಜಿಕೆಯನ್ನು ಮಾಡಿಸಿ, ನ್ಯಾಯಾಧೀಶನಂತೆ ಸ್ವತಃ ಛದ್ಮವೇಷ ಧರಿಸಿ ಜನರನ್ನು ವಂಚಿಸುತ್ತಿದ್ದನಂತೆ. ‘ಆರ್ಬಿಟ್ರಲ್ ಟ್ರಿಬ್ಯೂನಲ್ ಕೋರ್ಟ್’ ಎಂಬ ಫಲಕ ಹಾಕಿಕೊಂಡು, ಭೂವ್ಯಾಜ್ಯ ಸಂಬಂಧಿತ
ದಾವೆಗಳನ್ನು ವಿಚಾರಣೆ ಮಾಡುವಂತೆ ನಟಿಸಿ, ಹಣ ನೀಡಿದವರಿಗೆ ಅನುಕೂಲಕರ ಆದೇಶಗಳನ್ನು ನೀಡುತ್ತಾ ಬಂದಿದ್ದನಂತೆ ಈ ವಂಚಕ.
ಈತ ಕಳೆದ 5 ವರ್ಷಗಳಿಂದ ಜನರ ಕಣ್ಣಿಗೆ ಮಣ್ಣೆರಚಿದ್ದು ಮಾತ್ರವಲ್ಲದೆ ಅಲ್ಲಿನ ಆಳುಗ ವ್ಯವಸ್ಥೆಯನ್ನೂ ಅಣಕಿಸಿ ದ್ದಾನೆ ಎನ್ನಲಡ್ಡಿಯಿಲ್ಲ. ಈ ಸುದ್ದಿ ತಿಳಿದ ಅಹಮದಾಬಾದ್ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್ ಅವರು ಪೊಲೀಸರಿಗೆ ದೂರು ನೀಡಿದ ನಂತರ ಈ ವಂಚಕನ ಮತ್ತು ಸದರಿ ವಂಚನೆಯಲ್ಲಿ ಈತನಿಗೆ ನೆರವಾಗುತ್ತಿದ್ದವರ ಬಂಧನವಾಗಿ ಪ್ರಕರಣ ದಾಖಲಾಗಿದೆ ಎಂಬುದು ಲಭ್ಯ ಸುದ್ದಿ.
ವಂಚಕರಿಗೆ ಕೈಕೋಳ ತೊಡಿಸಿದ್ದು ಸಮಾಧಾನಕರ ಸಂಗತಿಯಾದರೂ, ಇಂಥದೊಂದು ಅಪಸವ್ಯ ನಮ್ಮ ವ್ಯವಸ್ಥೆಯ ಹದ್ದಿನ ಕಣ್ಣುಗಳಿಗೆ ಬೀಳುವುದಕ್ಕೆ ಇಷ್ಟು ತಡವಾಗಿದ್ದೇಕೆ? ಐದು ವರ್ಷಗಳವರೆಗೆ ಅವು ಮಂಜಾ ಗಿದ್ದವೇ? ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟುತ್ತವೆ. ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿ ನಗರ, ಪಟ್ಟಣ, ಹಳ್ಳಿ ಗಳಲ್ಲಿ ಠಿಕಾಣಿ ಹೂಡಿರುವ ನಕಲಿ ವೈದ್ಯರನ್ನು ಪೊಲೀಸರು ಪತ್ತೆಮಾಡಿ ಕೈಕೋಳ ತೊಡಿಸಿದಾಗ ಜನರು
ನೆಮ್ಮದಿಯ ನಿಟ್ಟುಸಿರು ಬಿಡುವುದಿದೆ; ಕಾರಣ, ತಮ್ಮ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಇಂಥವರಿಂದ ಇನ್ನು ಮುಂದಾದರೂ ದೂರ ಉಳಿಯಬಹುದು, ಮತ್ತಷ್ಟು ಎಚ್ಚರಿಕೆಯಿಂದ ಇರಬಹುದು ಎಂಬ ಗ್ರಹಿಕೆ.
ಆದರೆ, ಬರೋಬ್ಬರಿ 5 ವರ್ಷಗಳವರೆಗೆ ‘ನಕಲಿ ನ್ಯಾಯಾಲಯ’ವನ್ನು ನಡೆಸಿಕೊಂಡು ಬರುವಂಥ ಧಾರ್ಷ್ಟ್ಯ ಗುಜರಾತಿನ ಆ ವಂಚಕನಿಗೆ ದಕ್ಕಿದ್ದಾದರೂ ಹೇಗೆ? ಇದಕ್ಕಾಗಿ ಆತ ಯಾರೆಲ್ಲರನ್ನು ‘ಸರಿಮಾಡಿಕೊಂಡಿದ್ದ’?
ಅನ್ಯಾಯವಾದಾಗ ಜನರು ಬಾರಿಸಲು ಮುಂದಾಗುವ ‘ನ್ಯಾಯದ ಗಂಟೆ’ಯೇ ಕಳಪೆಮಾಲು ಎಂದಾದರೆ ಅವರಿಗೆ ಆಗುವ ಆಘಾತವೆಷ್ಟು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ‘ಕಾಂಚಾಣವಿದ್ದರೆ ಕಾರ್ಯಸಿದ್ಧಿ’ ಎಂಬ ಭಂಡ ಧೈರ್ಯವೇ ಇಂಥವರಿಗೆ ಬಲ ನೀಡಿರಬಹುದೇ?!
ಇದನ್ನೂ ಓದಿ: Vishwavani Editorial: ಪುಢಾರಿಗಳ ‘ಕುಟುಂಬ’ ಯೋಜನೆ!